ಪಂಚಕಲ್ಯಾಣ ಮಹೋತ್ಸವದಿಂದ ಸಮಾಜದಲ್ಲಿ ಶಾಂತಿ, ಸಹಾನುಭೂತಿ ಅಭಿವೃದ್ಧಿ
Panchakalyana Mahotsav promotes peace and compassion in society
ಲೋಕದರ್ಶನ ವರದಿ
ಹುಲಕೋಟಿ 13 : ಕರ್ನಾಟಕದಲ್ಲಿ ತಿರುಳ್ಗನ್ನಡನಾಡಿನ ಸೀಮೆಯಾಗಿದ್ದ ಕೊಪ್ಪಳವು ಜೈನ ಧರ್ಮದ ಆದೀತೀರ್ಥ, ಮಹಾತೀರ್ಥ, ತೀರ್ಥಕ್ಷೇತ್ರವಾಗಿದ್ದಿತು. ಇಲ್ಲಿಯ ಬೆಟ್ಟದಲ್ಲಿ ನೂರಾರು ಜೈನ ಮುನಿಗಳು ಮತ್ತು ಶ್ರಾವಕರು ಸಲ್ಲೇಖನದಿಂದ ಸಮಾಧಿಮರಣ ಹೊಂದಿದ್ದು, ಅವರ ತಪಸ್ಸಿನ ಪ್ರಭಾವದಿಂದ ಈ ಪರಿಸರವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಭಾವೈಕ್ಯತೆಯ ಕೇಂದ್ರವಾಗಿ ಕರ್ನಾಟಕದ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಹೇಳಿದರು. ಅವರು ಕುಷ್ಟಗಿ ತಾಲ್ಲೂಕಿನ ನಿಲೋಗಲ್ಲ ಗ್ರಾಮದಲ್ಲಿ ಸುಮಾರು 300 ವರ್ಷಗಳ ಪ್ರಾಚೀನ ಜೀರ್ಣಾವಸ್ಥೆಯ ಬಸದಿಯನ್ನು ನೂತನವಾಗಿ ಪುನರ್‌ನಿರ್ಮಿಸಿ ಬಸದಿಯಲ್ಲಿ ನೂತನ ಪಾರ್ಶ್ವನಾಥ ಶಿಲ್ಪ ಮತ್ತು ಮಾನಸ್ತಂಭದ ಮೇಲೆ ಚತುರ್ಮುಖ ಜಿನಬಿಂಬ ಪ್ರತಿಷ್ಠಾಪನೆ ನೆರವೇರಿಸುವ ಪವಿತ್ರ ಉದ್ದೇಶದಿಂದ ಆಯೋಜಿಸಿದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ‘ಕೊಪ್ಪಳ ಜಿಲ್ಲೆಯಲ್ಲಿ ಜೈನ ಧರ್ಮದ ಹಿರಿಮೆ ಮತ್ತು ಪಂಚಕಲ್ಯಾಣ ಮಹೋತ್ಸವದ ಪ್ರಸ್ತುತತೆ’ ಕುರಿತು ಉಪನ್ಯಾಸ ಮಾಡುತ್ತ ಜೈನ ಸಮಾಜದಲ್ಲಿ ಬಸದಿಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ, ತೀರ್ಥಂಕರರ ಶಿಲ್ಪಗಳ ಪ್ರತಿಷ್ಠಾಪನೆ, ಬಸದಿಗಳ ಸಂಕೀರ್ಣದಲ್ಲಿ ಮಾನಸ್ತಂಭ, ಕ್ಷೇತ್ರಪಾಲ ಮಂಟಪ ಮುಂತಾದ ಧಾರ್ಮಿಕ ಕಟ್ಟಡಗಳ ನಿರ್ಮಾಣದ ತರುವಾಯ ವಿಧಿವತ್ತಾಗಿ ‘ಪಂಚಕಲ್ಯಾಣ ಮಹೋತ್ಸವ’ ಕೈಗೊಳ್ಳುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಅಂದರೆ ಬಸದಿಗಳಲ್ಲಿ ಪ್ರತಿಷ್ಠಾಪಿಸುವ ತೀರ್ಥಂಕರರ ಬದುಕಿನಲ್ಲಿ ನಡೆದ ಗರ್ಭಾವತರಣ, ಜನ್ಮಾಭಿಷೇಕ, ದೀಕ್ಷೆ, ಕೇವಲಜ್ಞಾನ, ಪರಿನಿರ್ವಾಣ ಘಟನೆಗಳನ್ನು ಅವರ ಪರಿವಾರ ಮತ್ತು ಇಂದ್ರಾದಿದೇವತೆಗಳು ಹೇಗೆ ನಡೆಸಿದ್ದರೋ ಅದೇ ಮಾದರಿಯಲ್ಲಿ ಮತ್ತು ಅವರಂತೆಯೇ ಶ್ರಾವಕ-ಶ್ರಾವಿಕೆಯರು ಪಾತ್ರವೇಷಗಳನ್ನು ಧರಿಸಿ ಮುನಿಗಳು ಮತ್ತು ಭಟ್ಟಾರಕರ ಸಾನ್ನಿಧ್ಯದಲ್ಲಿ ಪ್ರತಿಷ್ಠಾಚಾರ್ಯರ ಮೂಲಕ ಉತ್ಸವ ನಡೆಸುತ್ತಾರೆ. ಇದು ಜೈನ ಪರಂಪರೆಯಲ್ಲಿ ರೂಢಿಯಲ್ಲಿರುವ ವಿಶಿಷ್ಟ, ವಿಶೇಷ, ಆಕರ್ಷಕ, ಪ್ರಭಾವಶಾಲಿ ಶ್ರದ್ಧಾಭಕ್ತಿಯ ಮಹೋತ್ಸವವಾಗಿದೆ ಎಂದು ತಿಳಿಸಿದರು.
ಪಂಚಕಲ್ಯಾಣ ಕಮೀಟಿಯ ಅಧ್ಯಕ್ಷ ಅಭಿನಂದನ ಗೋಗಿ ಅವರು ಕೇವಲ ಆರು ಜೈನ ಕುಟುಂಬಗಳಿರುವ ಈ ಗ್ರಾಮದಲ್ಲಿ ಬಸದಿ ನಿರ್ಮಿಸಿ ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಯುತ್ತಿರುವ ಈ ಪಂಚಕಲ್ಯಾಣ ಮಹೋತ್ಸವಕ್ಕೆ ನಾಡಿನ ಮತ್ತು ಸ್ಥಳೀಯ ಜೈನ, ಜೈನೇತರ ಬಂಧುಗಳ ಸಹಾಯ-ಸಹಕಾರ ಅವಿಸ್ಮರಣೀಯವಾಗಿದ್ದು, ಇದು ಜೈನರ ಸಾಮರಸ್ಯ, ಭಾವೈಕ್ಯತೆ, ಪರಸ್ಪರೋಪಗ್ರಹೋ ಜೀವಾಣಂ ಜೀವನ ಮೌಲ್ಯಗಳಿಗೆ ಅತ್ಯುತ್ತಮ ನಿದರ್ಶನವೆಂದು ಹೇಳಿದರು. ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರು ಮತ್ತು ಸೋಂದೆ, ಹೊಂಬುಜ, ವರೂರು, ಸಿಂಹನಗದ್ದೆ ಜೈನ ಮಠಗಳ ಭಟ್ಟಾರಕರ ಸಾನ್ನಿಧ್ಯದಲ್ಲಿ 2026ರ ಏಪ್ರಿಲ್ 10 ರಿಂದ 12ರವರೆಗೆ ನಡೆದ ಮಹೋತ್ಸವದಲ್ಲಿ ಮಾನ್ಯ ಶಾಸಕರು, ಅಧಿಕಾರಿಗಳು, ಜೈನ ಮತ್ತು ಜೈನೇತರ ಸಮಾಜಗಳ ಪದಾಧಿಕಾರಿಗಳು, ಹಿರಿಯರು, ದಾನಿಗಳು ಉಪಸ್ಥಿತರಿದ್ದರು. ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಆಶೀರ್ವಚನದಲ್ಲಿ ಪಂಚಕಲ್ಯಾಣ ಮಹೋತ್ಸವಗಳು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇವು ಮಾನವ ಜೀವನವನ್ನು ಸನ್ಮಾರ್ಗದ ಕಡೆಗೆ ದಾರಿ ತೋರಿಸುವ ಆತ್ಮಶುದ್ಧಿ, ಅಹಿಂಸೆ, ತ್ಯಾಗ, ಸತ್ಯ, ಅಪರಿಗ್ರಹ ಮೌಲ್ಯಗಳ ಸಂಕೇತವಾಗಿದ್ದು, ಇಂದಿನ ಭೌತಿಕ ಯುಗದಲ್ಲಿ ವ್ಯಕ್ತಿಗತ ಮತ್ತು ಸಾಮಾಜಿಕ ಜೀವನದಲ್ಲಿ ಸದ್ಭಾವನೆ, ಶಾಂತಿ, ನೈತಿಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ತಿಳಿಸಿದರು. ಮಹೋತ್ಸವದಲ್ಲಿ ಕೊಪ್ಪಳ, ಬಾಗಲಕೋಟ, ಗದಗ, ವಿಜಯಪುರ, ಧಾರವಾಡ, ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡು-ಹೊರನಾಡಿನ ಅಪಾರ ಶ್ರಾವಕ-ಶ್ರಾವಿಕೆಯರು ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 