ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ ಭಾಗ : ಜೈಶಂಕರ್

ವಾಷಿಂಗ್ ಟನ್, ಅ 3:   ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ ವಿಶೇಷ ಅಧಿಕಾರವನ್ನು ಬಹಳ ಹಿಂದೆಯೇ ವಾಪಸ್ಸು ಪಡೆಯಬೇಕಾಗಿತ್ತು ಎಂಬುದು ದೇಶದ ಜನತೆಯ ಬಹುದಿನಗಳ ಒತ್ತಾಯಾಗಿತ್ತು. ಅದನ್ನು ಮೋದಿ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಹೇಳಿದ್ದಾರೆ.

   ವಾಷಿಂಗ್ ಟನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ ಭಾಗವೇ ಆಗಿದೆ. ಅದು ತಮ್ಮ ವ್ಯಾಪ್ತಿಗೆ ಸೇರಿದ ಪ್ರದೇಶವೆಂದು ಪಾಕಿಸ್ತಾನ ಹೇಳಿಕೊಳ್ಳುತ್ತಿರುವುದು ಅಕ್ರಮ ಮತ್ತು ಅವಿವೇಕತನದ ಪರಮಾವಧಿ ಎಂದು ಇದೇ ಸಂದರ್ಭದಲ್ಲಿ ಅವರು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.    

   ಕಳೆದ 70 ವರ್ಷಗಳಿಂದಲೂ ಜಮ್ಮು ಮತ್ತು ಕಾಶ್ಮೀರದ ಒಂದು ಭಾಗವಾಗಿ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿದೆ. ಇದು ಭಾರತದ ನಕ್ಷೆಯೊಳಗೇ ಇದೆ. ದೇಶ ವಿಭಜನೆಯಾದಾಗ 1947 ರಲ್ಲಿ ನಡೆದ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದಾಗಲೂ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವೇ ಆಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

   ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದುಕೊಂಡ ನಂತರ ಪಾಕ್ ಆಕ್ರಮಿತ ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಾಗಿ ಹಾಗೂ ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿದ್ದರೆ ಅದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಪಟ್ಟಿರುತ್ತದೆ, ಪಟ್ಟಿರಲೇಬೇಕು, ಇಲ್ಲದೇ ಹೋದಲ್ಲಿ ಉಭಯ ದೇಶಗಳ ನಡುವಣ ಮಾತುಕತೆಗೆ ಯಾವುದೇ ಮಹತ್ವ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.