ಬಿ.ಇಡಿ ಪದವಿ ಪಡೆಯಲು ಉಪನ್ಯಾಸಕರಿಗೆ ವೇತನ ಸಹಿತ ರಜೆ: ವಿ.ಪ ಸದಸ್ಯ ನಿರಾಣಿ ಹರ್ಷ

ಬಿ.ಇಡಿ ಪದವಿ ಪಡೆಯಲು ಉಪನ್ಯಾಸಕರಿಗೆ ವೇತನ ಸಹಿತ ರಜೆ: ವಿ.ಪ ಸದಸ್ಯ ನಿರಾಣಿ ಹರ್ಷ Paid leave for lecturers to pursue B.Ed degree: VP member Nirani Harsha

ಬಿ.ಇಡಿ ಪದವಿ ಪಡೆಯಲು ಉಪನ್ಯಾಸಕರಿಗೆ ವೇತನ ಸಹಿತ ರಜೆ: ವಿ.ಪ ಸದಸ್ಯ ನಿರಾಣಿ ಹರ್ಷ 

ಬೀಳಗಿ 04: ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 2008 ಫೆ. 4ರ ನಂತರ ನೇಮಕಗೊಂಡು ಅನುದಾನಕ್ಕೆ ಒಳಪಟ್ಟ 364 ಬಿ.ಇಡಿ ಪದವಿ ಹೊಂದದ ಉಪನ್ಯಾಸಕರು ವೇತನ ಸಹಿತ ವ್ಯಾಸಂಗ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿರುವುದು ಸಂತಸದ ವಿಷಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.  

ಸುದ್ದಿಗಾರರೊಂದಿಗೆ ಮಾತನಾಡಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬಿ.ಇಡಿ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ 364 ಉಪನ್ಯಾಸಕರು ಸುಮಾರು 15 ವರ್ಷ ಸೇವೆ ಸಲ್ಲಿಸಿ ತದನಂತರ ವೇತನ ರಹಿತವಾಗಿ 2 ವರ್ಷ ಬಿ.ಇಡಿ ಪದವಿ ವ್ಯಾಸಂಗಕ್ಕೆ ಹೋಗುವುದೆಂದರೆ ಅವರ ಇಡೀ ಕುಟುಂಬವನ್ನು ಅರ್ಥಿಕ ದುಸ್ಥಿತಿಗೆ ತಳ್ಳಿದಂತಾಗುತ್ತಿತ್ತು ಮತ್ತು ಇದು ಅಸಾಧ್ಯವಾದ ಮಾತಾಗಿತ್ತು.  

   ಈ ಎಲ್ಲ ಸಮಸ್ಯೆಗಳನ್ನು ಪದವೀಧರ ಮತಕ್ಷೇತ್ರ ಮತ್ತು ಶಿಕ್ಷಕರ ಮತಕ್ಷೇತ್ರಗಳಿಂದ ಆಯ್ಕೆಯಾದ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ ಎಸ್‌. ಎಲ್ ಬೋಜೆಗೌಡ, ಶಶೀಲ್ ಜಿ ನಮೋಶಿ, ಪುಟ್ಟಣ, ಎಸ್ ವಿ ಸಂಕನೂರ, ಭೀಮರಾವ್ ಬಿ. ಪಾಟೀಲ್, ಡಾ. ಚಂದ್ರಶೇಖರ ಬಸವರಾಜ ಪಾಟೀಲ, ಚಿದಾನಂದ್ ಎಂ. ಗೌಡ, ಡಾ. ಧನಂಜಯ ಸರ್ಜಿ, ಮಧು ಜಿ. ಮಾದೇಗೌಡ, ಡಿ.ಟಿ. ಶ್ರೀನಿವಾಸ್, ಪ್ರಕಾಶ್ ಬಾಬಣ್ಣ ಹುಕ್ಕೇರಿ, ರಾಮೋಜಿಗೌಡ, ಕೆ. ವಿವೇಕಾನಂದ ಹಾಗೂ ಇನ್ನಿತರ ಎಲ್ಲಾ ವಿಧಾನ ಪರಿಷತ್ ಸದಸ್ಯರು ಹಾಗೂ ಉಪನ್ಯಾಸಕರ ಸಂಘಟನೆಯವರು ಮುಖ್ಯಮಂತ್ರಿಗಳ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಇಲಾಖೆ ಸಚಿವರ ಗಮನಕ್ಕೆ ತಂದು ಒತ್ತಡ ಹೇರಿದ ಪರಿಣಾಮವಾಗಿ ಸರ್ಕಾರ ಈ ಒಳ್ಳೆಯ ನಿರ್ಣಯ ಕೈಗೊಂಡಿದೆ.  

    ಈ ಹಿಂದೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬಿ.ಇಡಿ. ಪದವಿ ಹೊಂದಿ ನೇಮಕಗೊಂಡ ಉಪನ್ಯಾಸಕರಿಗೆ 2 ಬ್ಯಾಚುಗಳಲ್ಲಿ ವೇತನ ಸಹಿತ ಬಿ.ಇಡಿ. ವ್ಯಾಸಂಗ ಕೈಗೊಳ್ಳಲು ಅನುಮತಿ ನೀಡಿತ್ತು. ಆದಾದ ನಂತರ ಜಿ.ಓ.ಸಿ. ಕೋರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ.ಇಡಿ ರಹಿತ ಉಪನ್ಯಾಸಕರಿಗೂ ಕೂಡ ವೇತನ ಸಹಿತ ವ್ಯಾಸಂಗ ಮಾಡಿಕೊಂಡು ಬರಲು ಅನುಮತಿ ನೀಡಿದ ಮಾದರಿಯಲ್ಲಿಯೇ ಸರ್ಕಾರ ಈಗ ಆದೇಶ ಹೊರಡಿಸಿರುವುದು ಉಪನ್ಯಾಸಕರಿಗೆ ಸಂತಸ ತಂದಿದೆ ಎಂದರು.