ನವದೆಹಲಿ 25: ದೇಶ ತೊರೆಯಲು ನಿಗದಿಪಡಿಸಿದ ಗಡುವು ಮೀರಿ ಪಾಕಿಸ್ತಾನದ ಯಾವುದೇ ಪ್ರಜೆ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಶಿಕ್ಷೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಯಾ ರಾಜ್ಯಗಳಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರು ಪಾಕಿಸ್ತಾನಕ್ಕೆ ಶೀಘ್ರ ಮರಳುವಂತೆ ಸೂಚಿಸಲು ಕೇಳಿಕೊಳ್ಳುತ್ತಿದ್ದಾರೆ.
ಭಾರತ ಸದ್ಯ ಪಾಕಿಸ್ತಾನದ ಪ್ರಜೆಗಳಿಗೆ ನೀಡಿರುವ ವೀಸಾಗಳ ಅವಧಿಯು ಏಪ್ರಿಲ್ 27ರಿಂದ ಜಾರಿಗೆ ಬರುವಂತೆ ಮುಕ್ತಾಯವಾಗಲಿದೆ. ವೈದ್ಯಕೀಯ ವೀಸಾ ಏಪ್ರಿಲ್ 29ರವರೆಗೆ ಮಾತ್ರ ಊರ್ಜಿತವಾಗಿರಲಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಪ್ರಕಟಿಸಿದೆ.
ಪಾಕಿಸ್ತಾನಕ್ಕೆ ಶಿಕ್ಷೆ ನೀಡಲು ಎಲ್ಲಾ ರಾಜ್ಯಗಳು ಸಮನ್ವಯ ಸಾಧಿಸಲು ಕೇಳಿಕೊಂಡಿದ್ದಾರೆ.
ಬಹುತೇಕ ಪ್ರವಾಸಿಗರು ಸೇರಿದಂತೆ 26 ಮಂದಿಯನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ, ಇದೇ ಏಪ್ರಿಲ್ 27 ರಿಂದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ರದ್ದುಗೊಳಿಸುವುದಾಗಿ ಭಾರತ ಘೋಷಿಸಿತ್ತು. ಅದರ ಜೊತೆಗೆ ಪಾಕಿಸ್ತಾನದಲ್ಲಿ ವಾಸಿಸುವ ಭಾರತೀಯ ಪ್ರಜೆಗಳು ಆದಷ್ಟು ಬೇಗನೆ ತವರು ದೇಶಕ್ಕೆ ಮರಳುವಂತೆ ಸಲಹೆ ನೀಡಲಾಗಿದೆ.