ಲೋಕದರ್ಶನ ವರದಿ
ಗಿಣಿಗೇರಾ ಗ್ರಾಮ ಪಂಚಾಯತಿಯ ಮಹಿಳಾ ಗ್ರಾಮಸಭೆಯಲ್ಲಿ ಪದ್ಮಶ್ರೀ ಭೀಮವ್ವ ಶಿಳ್ಳಿಕ್ಯಾತರ ಭಾಗಿ ಕುಟುಂಬದ ಏಳಿಗೆಗೆ ಮಹಿಳೆಯ ಶ್ರಮ ಶ್ಲಾಘನಿಯ- ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಪ್ರಕಾಶ ವಿ
ಕೊಪ್ಪಳ 05: ಹಗಲಿರುಳು ತನ್ನ ಕುಟುಂಬದ ಏಳ್ಗೆಗೆ ಶ್ರಮಿಸುತ್ತಿರುವ ಮಹಿಳೆಯ ಶ್ರಮ ಶ್ಲಾಘನೀಯವಾಗಿದೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಪ್ರಕಾಶ ವಿ. ಹೇಳಿದರು.
ಅವರು ಇತ್ತೀಚೆಗೆ ಗಿಣಿಗೇರಾದಲ್ಲಿ ಗ್ರಾಮ ಪಂಚಾಯತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಗ್ರಾಮಸಭೆಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದಿನ ಯುಗ ಸ್ಪರ್ಧಾತ್ಮಕ ಯುಗವಾಗಿರುವದರಿಂದ ಮಹಿಳೆಯರು ಎಲ್ಲಾ ರಂಗದಲ್ಲಿ ಭಾಗವಹಿಸಿ ಸಬಲೀಕರಣವಾಗುತ್ತಿರುವದರಿಂದ ದೇಶ ಅಭಿವೃದ್ದಿಯತ್ತ ಮುನ್ನಡೆಯಲು ಸಾಧ್ಯವಾಗಿದೆ. ಭಾರತ ಸಂವಿಧಾನವು ಕೂಡಾ ಮಹಿಳೆಯರಿಗೆ ಸಮಾನ ಮೀಸಲಾತಿ ಕಲ್ಪಿಸಿರುವದರಿಂದ ಅವರ ಹಕ್ಕುಗಳನ್ನು ಎತ್ತಿ ಹಿಡಿದಿದೆ. ದೇಶ ಅಭಿವೃದ್ದಿ ಹೊಂದಿದೆ ಎಂದು ಹೇಳಬೇಕಾದರೆ ಅಲ್ಲಿನ ಮಹಿಳೆಯರಿಗೆ ನೀಡಿರುವ ಹಕ್ಕುಗಳ ಆಧಾರದ ಮೇಲೆ ನಿರ್ಧಾರಿತವಾಗಿರುತ್ತದೆ. ಮಹಿಳೆಯರು ಕುಟುಂಬದ ನೊಗವನ್ನು ಹೊತ್ತು ಜವಾಬ್ದಾರಿಯಿಂದ ಹಿಂದೆ ಸರಿಯದೇ ಮುನ್ನುಗ್ಗಿ ತನ್ನ ಶಕ್ತಿ ಮೀರಿ ತನ್ನ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಹಿಳೆ ಕೇವಲ ಕುಟುಂಬಕ್ಕೆ ಸೀಮಿತವಾಗಿರದೇ ತಾನು ಕೂಡಾ ಸಬಲೇ ಎನ್ನುವದನ್ನು ಕೆಲಸದ ಮೂಲಕ ತೋರಿ್ಡಸುತ್ತಿದ್ದಾಳೆ ಎಂದರು.
ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಲಾಲನೆ-ಪಾಲನೆ, ಶಿಕ್ಷಣ, ಕುಟುಂಬ ನಿರ್ವಹಣೆ, ಕಛೇರಿ ಕೆಲಸ, ಶಿಕ್ಷಣ, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಇತ್ಯಾದಿಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜ ನೀಡಿದ ಗುರುತರ ಜವಾಬ್ದಾರಿಯನ್ನು ಸುಗಮವಾಗಿ ಸಾಗಿಸುತ್ತಿದ್ದಾರೆ. ಮಹಿಳೆಯರಿಗೆ ಉತ್ತಮ ವಾತಾವರಣ ಕಲ್ಪಿಸಲು ಎಲ್ಲರು ಶ್ರಮಿಸಬೇಕೆಂದು ಕರೆ ನೀಡಿದರು.
ತೊಗಲುಗೊಂಬೆಯಾಟದ ಖ್ಯಾತಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮಮ್ಮಗೆ ಗೌರವ ಸನ್ಮಾನ: ಬಹು ವರ್ಷಗಳಿಂದ ತೊಗಲುಗೊಂಬೆ ಆಟವನ್ನು ದೇಶ-ವಿದೇಶಗಳಲ್ಲಿ ಪ್ರದರ್ಶಿಸಿ ವಿಖ್ಯಾತಿ ಹೊಂದಿರುವ ಮೋರನಾಳ ಗ್ರಾಮದ ಭೀಮಮ್ಮ ಇವರಿಗೆ ಇತ್ತೀಚಿಗೆ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಭೀಮವ್ವ ಶಿಳ್ಳಿಕ್ಯಾತರ ಅವರು ಮಹಿಳಾ ಗ್ರಾಮಸಭೆಯಲ್ಲಿ ಭಾಗವಹಿಸಿದ ಪ್ರಯುಕ್ತ ಗ್ರಾಮ ಪಂಚಾಯತಿಯಿಂದ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಂಜಿತಾ ಯಮನೂರ್ಪ ಚವ್ಹಾಣ್, ತಾಲೂಕ ಪಂಚಾಯತಿ ಸಹಾಯಕ ನಿರ್ದೇಶಕ ಮಹೇಶ್, ಪಂಚಾಯತ ಅಭಿವೃದ್ದಿ ಅಧಿಕಾರಿ ಮಂಜುಳಾ ದೇವಿ ಹೂಗಾರ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ ಪಾಟೀಲ್, ಕರಿಯಪ್ಪ ಮೇಟಿ, ಲಕ್ಷ್ಮಣ ಡೊಳ್ಳಿನ, ಶಶಿಕಲಾ ಬಾಬು ಗುಡೆಕರ್, ಮೈಲಾರ್ಪ ಕುಡ್ಲಿ, ಸುಮಂಗಲಾ ಶೇಕಪ್ಪ ಇಂದರಗಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮರಿಯಪ್ಪ ಶಿಡ್ಲೆಪ್ಪನವರ, ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಸದಸ್ಯರು ಮಹಿಳಾ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಮಹಿಳೆಯರು ಉಪಸ್ಥಿತರಿದ್ದರು.