ಮುಂದಿನ ದಿನಗಳಲ್ಲಿ ತರಕಾರಿ, ಹಣ್ಣು ಬೆಳೆಗಾರರಿಗೆ ಪ್ಯಾಕೇಜ್ : ಬಿ.ಸಿ.ಪಾಟೀಲ್

ಬೆಂಗಳೂರು, ಮೇ 7,ಕಳೆದ ಒಂದು ತಿಂಗಳಿನಿಂದ ರಾಜ್ಯದ ಎಲ್ಲಾ 30 ಜಿಲ್ಲೆಗಳಿಗೆ ಭೇಟಿ ನೀಡಿ, ರೈತರ  ಸಮಸ್ಯೆ ಆಲಿಸಿ  ರೈತರ ನೆರವಿಗೆ ಬರುವಂತೆ ಮುಖ್ಯಮಂತ್ರಿಗಳಿಗೆ ವರದಿ ರೂಪದಲ್ಲಿ ಮನವಿ  ಮಾಡಿದ್ದೇನೆ. ಮುಖ್ಯಮಂತ್ರಿಗಳು ಕೊರೊನಾ ಲಾಕ್‌ ಡೌನ್ ವಿಶೇಷ ಪ್ಯಾಕೇಜ್‌ನಲ್ಲಿ  ಶೀಘ್ರವೇ ತರಕಾರಿ, ಹಣ್ಣು ಬೆಳೆಗಾರರನ್ನು ಸೇರಿಸಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್  ಸ್ಪಷ್ಟಪಡಿಸಿದ್ದಾರೆ.ವಿಕಾಸಸೌಧದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಿನ್ನೆ ಮುಖ್ಯಮಂತ್ರಿಯವರು 1610 ಕೋಟಿ ರೂ. ಯ ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದಾರೆ. ಮುಖ್ಯವಾಗಿ  ಹೂ ಬೆಳೆಗಾರರಿಗೆ ಪ್ಯಾಕೇಜ್ ನೀಡಿದ್ದಾರೆ.  ಸದ್ಯದಲ್ಲಿಯೇ   ತರಕಾರಿ ಮತ್ತು ಹಣ್ಣು ಬೆಳೆಗಾರರಿಗೂ  ಪ್ಯಾಕೇಜ್ ಪ್ರಕಟವಾಗಲಿದೆ. ಆರ್ಥಿಕ  ಸಂಕಷ್ಟದಲ್ಲಿಯೂ ಮುಖ್ಯಮಂತ್ರಿಗಳು ರೈತರ ಬಗ್ಗೆ ಕಾಳಜಿಯಿಂದಾಗಿ ಪ್ಯಾಕೇಜ್ ಪ್ರಕಟ  ಮಾಡಿದ್ದಾರೆ ಎಂದರು.
ಹೀಗಾಗಿ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ಇಂತಿಷ್ಟೇ ಪರಿಹಾರ  ಕೊಡಿ ಎಂದು ಒತ್ತಾಯಿಸುವುದಿಲ್ಲ. ಪರಿಹಾರ ಎನ್ನುವುದು ಸಾವಿನ ಸಂದರ್ಭದಲ್ಲಿ ಬಾಯಿಗೆ  ನೀರು ಬಿಟ್ಟಂತೆ ಸಹಾಯಕವಾಗಲಿದೆ. ಈ ಕೊರೋನ ಸಂದರ್ಭದಲ್ಲಿ ಬದುಕು ಮುಖ್ಯವಾಗಿದೆ. ಕೊರೊನಾ  ಮುಗಿದ ಬಳಿಕ ಮತ್ತೆ ಬದುಕು ಕಟ್ಟಿಕೊಳ್ಳಬೇಕು. ಕೊರೊನಾ ಇಡೀ ವಿಶ್ವಕ್ಕೆ ಮಾರಕವಾಗಿ  ಮಾರ್ಪಟ್ಟದೆ. ಇದರಿಂದ ಬದುಕಿ ಜೀವನಕಟ್ಟಿಕೊಳ್ಳಬೇಕು ಎಂದರು.
ಕಳಪೆ ಬಿತ್ತನೆ  ಬೀಜದ ಮಾಫಿಯಾಯನ್ನು ಬಯಲು ಮಾಡಲಾಗಿದ್ದು ಆಂಧ್ರದ ಮೂಲವನ್ನು ಪತ್ತೆ  ಮಾಡಲಾಗಿದೆ. ಆಂಧ್ರದಲ್ಲಿ ರಿಜೆಕ್ಟ್ ಆಗಿದ್ದ ಬೀಜಗಳನ್ನು ರಾಜ್ಯದಲ್ಲಿ ಮಾರಾಟ  ಮಾಡಲಾಗುತ್ತಿತ್ತು. ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಇತ್ಯಾದಿ ಕಳಪೆ ಬೀಜಗಳು ಸೇರಿದಂತೆ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಕಳಪೆ ಬೀಜ ವಶಕ್ಕೆ ಪಡೆದು ಎಂಟು ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದರು.
ಕೇಂದ್ರದ  ಮಟ್ಟದಲ್ಲಿಯೂ ನಮ್ಮ ರಾಜ್ಯದ ಅಗ್ರಿವಾರ್ ರೂಮ್ ಸದ್ದುಮಾಡಿದ್ದು ಕೇಂದ್ರದಿಂದಲೂ ಸಹ  ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್‌ ಡೌನ್ ಘೋಷಣೆಯಾಗುತ್ತಿದ್ದಂತೆಯೇ ರೈತರ ಕೃಷಿ  ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕಾರ್ಯಪ್ರವೃತ್ತವಾಗಿ ಕೆಲಸ  ನಿರ್ವಹಿಸಿದೆ‌.   ರಾಯಚೂರು, ಕೊಪ್ಪಳ ಭಾಗದಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ  ಹಾನಿಗೊಳಗಾಗಿದ್ದ ಬತ್ತದ ಬೆಳೆಗೆ ವರದಿ ಕೊಟ್ಟ ಮೂರೇ ದಿನದಲ್ಲಿ ಮುಖ್ಯಮಂತ್ರಿಗಳ 45  ಕೋ‌‌ಟಿ ರೂ.ಪರಿಹಾರ ಘೋಷಿಸಿದರು. ಮುಂದಿನ ದಿನಗಳಲ್ಲಿಯೂ ಸರ್ಕಾರ ರೈತರಿಗೆ ಇನ್ನಷ್ಟು  ಪರಿಹಾರ ನೀಡಲಿದೆ. ರೈತರೊಂದಿಗೆ ಇಲಾಖೆ ಹಾಗೂ ಸರ್ಕಾರ ಎಂದಿಗೂ ಇರಲಿದೆ ಎಂದು  ಬಿ.ಸಿ.ಪಾಟೀಲ್ ಭರವಸೆ ನೀಡಿದರು.