ರೈತನ ಮೇಲೆ ಪಿಎಸ್‌ಐ ದೌರ್ಜನ್ಯ ಪ್ರಕರಣ: ಐದನೇಯ ದಿನಕ್ಕೆ ಕಾಲಿರಿಸಿದ ಧರಣಿ

ರೈತನ ಮೇಲೆ ಪಿಎಸ್‌ಐ ದೌರ್ಜನ್ಯ ಪ್ರಕರಣ: ಐದನೇಯ ದಿನಕ್ಕೆ ಕಾಲಿರಿಸಿದ ಧರಣಿ PSI atrocities on farmer: Protest enters fifth day

ಗದಗ 28 : ಪೊಲೀಸ್‌ರಿಗೆ ಮುಗ್ಧ ಜನರನ್ನು ದೈಹಿಕವಾಗಿ ಹಿಂಸಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದಾಗಲೂ ಸಹ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಅವರಿಗೆ ಲಂಬಾಣಿ ರೈತ ಸೋಮಪ್ಪ ಲಮಾಣಿ ಮೇಲೆ ಹಲ್ಲೆ ನಡೆಸಿ ಹಣ ದೋಚಲು ಅಧಿಕಾರ  ನೀಡಿದವರು ಯಾರು ? ಎಂದು ಹಿಂದು ಸಂಘಟನೆಗಳ ಧುರೀಣ ರಾಜೂ ಖಾನಪ್ಪನವರ ಪ್ರಶ್ನಿಸಿದರು. ಶಿರಹಟ್ಟಿ ತಹಸೀಲ್ದಾರ ಕಚೇರಿ ಮುಂದೆ ಕಳೆದ ಐದು ದಿನಗಳಿಂದ ಶಿರಹಟ್ಟಿ ಪಿಎಸ್‌ಐ ವರ್ಗಾವಣೆಗೆ ಆಗ್ರಹಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು. 

ಇತ್ತಿಚೆಗೆ ಜಿಲ್ಲೆಯ ಪೊಲೀಸರಿಗೆ ಮುಗ್ಧ ಜನರಿಗೆ ಲಾಠಿಯಿಂದ ಹೊಡೆದು ಹಲ್ಲೆ ನಡೆಸಿ ಮನಬಂದಂತೆ ಅಶ್ಲೀಲ ಶಬ್ದಗಳಿಂದ ಮಾತನಾಡುವದು ಫ್ಯಾಶನ್ ಆಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಅವರು ಅದರ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಬದಲಿಗೆ ದೂರು ನೀಡಿದವರನ್ನೇ ತಪ್ಪಿತಸ್ಥರನ್ನಾಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಇರುವದು ಸಮಾಜದ ಸ್ವಾಸ್ಥ್ಯ ಕಾಪಾಡುವದಕ್ಕಾಗಿಯೇ ಹೊರತು ಮುಗ್ಧ ಜನರನ್ನು ಹಿಂಸಿಸಿ ಇಸ್ಟೀಟಾಟವಾಡಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಿ ಹಣ ದೋಚಲು ಅಲ್ಲವೆಂದು ಅವರು ಹೇಳಿದರು. 

ಶಿರಹಟ್ಟಿ ತಾಲೂಕ ರಣತೂರ ಗ್ರಾಮದ ಮುಗ್ಧ ಲಂಬಾಣಿ ರೈತ ಸೋಮಪ್ಪ ಲಮಾಣಿ ಜಮೀನಿನ ಕೆಲಸ ಕಾರ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ತಡೆದು ಇಸ್ಪೀಟಾಟದಲ್ಲಿ ನಿರತರಾಗಿದ್ದಾಗ ಬಂಧಿಸಿದಂತೆ ದಾಖಲೆ ಸೃಷ್ಟಿಸಿದ್ದಾರೆ. ಪಿಎಸ್‌ಐ ನಡೆಸಿದ ಹಲ್ಲೆಯಿಂದ ಸೋಮಪ್ಪ ಲಮಾಣಿ ಮೂತ್ರಪಿಂಡಕ್ಕೆ ಬಾವು ಬಂದಿದೆ.ಹಲ್ಲೆ ನಡೆಸಿದ ನಂತರ ಸೋಮಪ್ಪ ಲಮಾಣಿ ಬಳಿಯಿದ್ದ ಸಹಸ್ರಾರು ರೂಪಾಯಿಗಳನ್ನು ದೋಚಲಾಗಿದೆ. ಕಾನೂನಿನಲ್ಲಿ ಆರೋಪಿಗಳ ಬಳಿ ಇರುವ ಹಣವನ್ನು ದೋಚಲು ಅವಕಾಶವಿದೆಯೇ?.ಸೋಮಪ್ಪ ಲಮಾಣಿ ಬಳಿ ಹಣವಿಲ್ಲವೆಂದು ಹೇಳಿದಾಗ  ಆತನ ಮನೆಗೆ ಪೊಲೀಸರನ್ನು ಕಳಿಸಿ ಹಣ ತರಿಸಿ ವಸೂಲಿ ಮಾಡಲಾಗಿದೆ. ಪಿಎಸ್‌ಐ ಈರಣ್ಣ ರಿತ್ತಿ ಅವರೇ ಸೋಮಪ್ಪ ಲಮಾಣಿ ಮತ್ತು ಇತರರನ್ನು ಕೂಡಿಸಿ ಇಸ್ಟೀಟಾಟವಾಡಿದಂತೆ ಸೃಷ್ಠಿಸಿ ವೀಡೀಯೋ ಚಿತ್ರಿಕರಣ ಮಾಡಿಸಿದ್ದಾರೆಂದು ಆರೋಪಿಸಿದರು. 

ಈ ಹಿಂದೆ ಲಕ್ಷ್ಮೇಶ್ವರದಲ್ಲಿ ಪಿಎಸ್‌ಐ ಆಗಿದ್ದ ಈರಣ್ಣ ರಿತ್ತಿ ಅಲ್ಲಿಯೂ ಸಹ ಹಿಂದು ವಿರೋಧಿ,ರೈತ ವಿರೋಧಿ ಕೃತ್ಯವೆಸಗಿದ್ದಾರೆ. ವಿಜಯದಶಮಿಯಂದು ಶಾಂತಿಯುತವಾಗಿ ದುರ್ಗಾ ಮೂರ್ತಿಯನ್ನು ವಿಸರ್ಜಿಸಿ ಮನೆಗೆ ಮರಳುತ್ತಿದ್ದ ಗೋಸಾವಿ ಜನಾಂಗದ ಮಹಿಳೆಯರು,ಯುವಕರ ಮೇಲೆ  ಲಾಠಿ ಪ್ರಹಾರ ನಡೆಸಿ ತೀವ್ರ ಗಾಯಗೋಳಿಸಿದ್ದರು.ಈ ರೀತಿ ಮಾಡಲು ಅವರಿಗೆ ಯಾರು ಕುಮ್ಮಕ್ಕು ನೀಡುತ್ತಿದ್ದಾರೆ?.ಈ ಅಧಿಕಾರಿಯ ನಡವಳಿಕೆಯನ್ನು ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ಧರಣಿ ಸತ್ಯಾಗ್ರಹ,ಲಕ್ಷ್ಮೇಶ್ವರ ಬಂದ್ ನಡೆಸಿದಾಗ ಅಂದಿನ ಎಸ್ಪಿ ಬಾಬಾಸಾಹೇಬ ನೇಮಗೌಡ ಈರಣ್ಣ ರಿತ್ತಿ ಅವರನ್ನು ಬೆಳಗಾಂವಿಗೆ ವರ್ಗಾಯಿಸಿದ್ದರು. ಮತ್ತೆ ಇದೇ ಅಧಿಕಾರಿ ಶಿರಹಟ್ಟಿ ತಾಲೂಕ ಪಿಎಸ್ ಐ ಆಗಿ ವರ್ಗಾವಣೆಗೊಂಡು ಬಂದಿದ್ದಾರೆ. ಈ ಅಧಿಕಾರಿಗೆ ಶಿರಹಟ್ಟಿ ತಾಲೂಕ ಹೊರತುಪಡಿಸಿ ಬೇರೆ ಕಡೆ ನೌಕರಿ ಮಾಡಲಾಗುವದಿಲ್ಲವೇ? ಶಿರಹಟ್ಟಿ ತಾಲೂಕನಲ್ಲಿ ಅಧಿಕಾರಿಗೆ ವಿಶೇಷ ಆಮದನಿ ದೊರೆಯುತ್ತಿದೆಯೇ? ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. 

ಜಮೀನಿನಿಂದ ಮನೆಗೆ ತೆರಳುತ್ತಿದ್ದ ಮುಗ್ಧ ರೈತ ಸೋಮಪ್ಪ ಲಮಾಣಿ ಮೇಲೆ ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ ಈರಣ್ಣ ರಿತ್ತಿ ಅವರನ್ನು ಕೂಡಲೇ ಅಮಾನತ್‌ಗೋಳಿಸಬೇಕು.ಶಿರಹಟ್ಟಿ ಪೊಲೀಸ್ ಠಾಣೆಗೆ ದಕ್ಷ ಅಧಿಕಾರಿಯನ್ನು ವರ್ಗಾಯಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸೋಮಪ್ಪ ಲಮಾಣಿ,ಗಂಗವ್ವ ಲಮಾಣಿ,ಸತೀಶ ಕುಂಬಾರ,ಸಂತೋಷ ಕುರಿ,ಪರಶುರಾಮ ಡೊಂಕಹಳ್ಳಿ,ವೆಂಕಟೇಶ ದೊಡ್ಡಮನಿ,ಭರತ್ ಲದ್ದಿ,ಈಶ್ವರ ಕಾಟವಾ,ಶಿವಕುಮಾರ ಲದ್ದಿ,ಪ್ರವೀಣ ಹುಡೇದ,ಬಸವರಾಜ ಬಜಂತ್ರಿ,ಮಂಜುನಾಥ ವಡ್ಡರ,ರವಿ ಬಂಡಿವಡ್ಡರ,ರಮೇಶ ಬೆಂತೂರ,ಆನಂದ ಹುಡೇದ,ಪ್ರವೀಣ ಬೆಟಗೇರಿ ಮುಂತಾದವರಿದ್ದರು.