ಬಜೆಟ್ ಪ್ರತಿಗೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ: ಆಯವ್ಯಯ ಮಂಡನೆಗೂ ಮುನ್ನ ದೇವಸ್ಥಾನದಲ್ಲಿ ಪೂಜೆ

ಬೆಂಗಳೂರು,ಮಾ.5, 2020-21ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಬಜೆಟ್ ಪ್ರತಿ ಇರುವ ಸೂಟ್ಕೇಸ್ನೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಮುಖ್ಯಮಂತ್ರಿ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಸೂಟ್ಕೇಸನ್ನು ಅರ್ಚಕರಿಗೆ ನೀಡಿ ಪೂಜೆ ಸಲ್ಲಿಸುವಂತೆ ಕೋರಿದರು. ಅದರಂತೆ ಅರ್ಚಕರು ಕೆಲವು ನಿಮಿಷಗಳ ಕಾಲ ಸೂಟ್ಕೇಸ್ ಅನ್ನು ದೇವರ ಪ್ರತಿಮೆಯ ಬಳಿ ಇಟ್ಟು ಪೂಜೆ ಸಲ್ಲಿಸಿದರು.ಈ ವೇಳೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪುತ್ರ ವಿಜಯೇಂದ್ರ, ಶಾಸಕ ಎಸ್.ಆರ್. ವಿಶ್ವನಾಥ್ ಮತ್ತಿತರರು ಇದ್ದರು. ಹಸಿರು ಶಾಲು ಹೊತ್ತು ಆಗಮಿಸಿದ ಮುಖ್ಯಮಂತ್ರಿಯವರನ್ನು ದೇವಸ್ಥಾನದ ಅರ್ಚಕರು ಸ್ವಾಗತಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ. ರೈತರ ಪರವಾದ ಮಂಡನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದೊಂದು ವಿಶೇಷ ಬಜೆಟ್ ಆಗಿರಲಿದೆ. ಪ್ರತಿಪಕ್ಷಗಳು ಸಹಕಾರ ನೀಡಿದರೆ ಇಡೀ ತಿಂಗಳು ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಎಲ್ಲ ಪ್ರತಿಪಕ್ಷ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಈಗ ಜಾರಿಯಲ್ಲಿರುವ ಯಾವುದೇ ಯೋಜನೆಯನ್ನು ಕಡಿತಗೊಳಿಸುವುದಿಲ್ಲ. ಆದರೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.