ಬೆಂಗಳೂರು, ಫೆ 22 : ರೌಡಿಶೀಟರ್ ಮೇಲೆ ಗುಂಡು ಹಾರಿಸಿ ಪೊಲೀಸರು ಬಂಧಿಸಿರುವ ಘಟನೆ ನಗರದ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಮಲ್ಲಸಂದ್ರದ ಬಳಿ ನಡೆದಿದೆ.ತುಮಕೂರು ಜಯನಗರ ರೌಡಿಶೀಟರ್ ಮೇಲೆ ಫರ್ನಾಂಡೀಸ್ ಅಲಿಯಾಸ್ ಗುಂಡ ನ ಮೇಲೆ ಗುಂಡು ಹಾರಿಸಿ, ಬಂಧಿಸಲಾಗಿದೆ.ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಲು ಬೆಂಗಳೂರು- ತುಮಕೂರು ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು.ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲು ತೆರಳಿದಾಗ, ಫರ್ನಾಂಡೀಸ್ ಪೊಲೀಸರ ಮೇಲೆಯೇ ಮಾರಣಾಂತಕ ಹಲ್ಲೆ ಮಾಡಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ತುಮಕೂರು ತಿಲಕ್ ಪಾರ್ಕ್ ಪೊಲೀಸ್ ಇನ್ಸ್ ಪೆಕ್ಟರ್ ಪಾರ್ವತಮ್ಮ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಆರೋಪಿ ರೌಡಿಶೀಟರ್ 14ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂದು ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸಲು ಸೋಲದೇವನಹಳ್ಳಿ, ಸುಬ್ರಮಣ್ಯ ನಗರ ಪೊಲೀಸರು ಕೂಡ ಭಾಗಿಯಾಗಿದ್ದರು.ಆರೋಪಿಯ ಹಲ್ಲೆಯಿಂದ ಸೋಲದೇವನಹಳ್ಳಿ ಪೇದೆ ಶ್ರೀನಿವಾಸ್ ಹಾಗೂ ತಿಲಕ್ ಪಾರ್ಕ್ ಪೇದೆ ಮಂಜುನಾಥ್ ಗೆ ಗಾಯಗಳಾಗಿದ್ದು, ಸದ್ಯ ಆರೋಪಿ, ಪೇದೆಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.