ನವದೆಹಲಿ 29: ಡಿಸ್ಕವರಿ ವಾಹಿನಿಯಲ್ಲಿ ಮುಂದಿನ ತಿಂಗಳು ಆಗಸ್ಟ್ 12ರಂದು ಪ್ರಸಾರವಾಗುತ್ತಿರುವ 'ಮ್ಯಾನ್ ವರ್ಸಸ್ ವೈಲ್ಡ್' ವಿತ್ ಬೇರ್ ಗ್ರಿಲ್ಸ್ ಮತ್ತು ಪಿಎಂ ಮೋದಿ' ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಸಿಕೊಂಡಿದ್ದಾರೆ
ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ವಿಷಯ ಹೊಂದಿರುವ ಮ್ಯಾನ್ ವರ್ಸಸ್ ವೈಲ್ಡ್' ಚಿತ್ರದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಬೇರ್ ಗ್ರಿಲ್ಸ್ ಕಾಣಿಸಿಕೊಂಡಿದ್ದು, ಪ್ರಾಣಿಗಳು ಎಲ್ಲೆಂದರಲ್ಲಿ ಸ್ವತಂತ್ರವಾಗಿ ಅಡ್ಡಾಡುವ ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ ನಲ್ಲಿ ಚಿತ್ರೀಕರಿಸಲಾಗಿದೆ
ಡಿಸ್ಕವರಿ ಚಾನಲ್ ಆಗಸ್ಟ್ 12ರ ರಾತ್ರಿ 9 ಗಂಟೆಗೆ 180 ದೇಶಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಸಾಹಸಿ ಜೋಡಿಗಳಾದ ಪ್ರಧಾನಿ ಮೋದಿ ಹಾಗೂ ಬೇರ್ ಗ್ರಿಲ್ಸ್ ಅರಣ್ಯವೊಂದರಲ್ಲಿ ತೆಪ್ಪವನ್ನು ತಯಾರಿಸಿ, ಹರಿಯುವ ನದಿಯನ್ನು ದಾಟುವ ದೃಶ್ಯವೂ ಚಿತ್ರದಲ್ಲಿದೆ.
ಅಲ್ಲದೆ, ವನ್ಯಜೀವಿ ಸಂರಕ್ಷಣೆ, ಪರಿಸರ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗಿದ್ದು, ಕಣ್ತಣಿಸುವ ಪ್ರಕೃತಿ ಹಾಗೂ ಸಾಹಸದ ಜೊತೆಗೆ ಪ್ರಧಾನಿ ಮೋದಿಯವರು ತಮ್ಮ ಸ್ವಂತ ಅನುಭವಗಳನ್ನು ಹೇಳಿರುವುದು ವಿಶೇಷ.
"ಭಾರತದಲ್ಲಿ ಎತ್ತ ನೋಡಿದರೂ ಹಸಿರು ಹೊದ್ದ ವನಸಿರಿ, ಸುಂದರ ಪರ್ವತಗಳು, ಪವಿತ್ರ ನದಿಗಳು. ಈ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮವನ್ನು ವೀಕ್ಷಿಸಿದರೆ ಭಾರತದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲು ಮನಸ್ಸು ಮಾಡುತ್ತೀರಿ. ಇಲ್ಲಿಗೆ ಬಂದಿದ್ದಕ್ಕೆ ಬೇರ್ ಗ್ರಿಲ್ಸ್ ಗೆ ಮತ್ತು ಡಿಸ್ಕವರಿ ವಾಹಿನಿಗೆ ಧನ್ಯವಾದಗಳು" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕಾರ್ಯಕ್ರಮದ ಕುರಿತು ಮಾತನಾಡಿರುವ ಮೋದಿ, "ಅನೇಕ ವರ್ಷಗಳ ಕಾಲ ನಾನು ಪ್ರಕೃತಿ, ಪರ್ವತ, ಅರಣ್ಯದ ನಡುವೆ ಜೀವಿಸಿದ್ದೆ ಆ ದಿನಗಳು ನನ್ನ ಬದುಕಿನ ಮೇಲೆ ಬಹಳ ಪರಿಣಾಮ ಬೀರಿದೆ ಹೀಗಾಗಿ ರಾಜಕೀಯವನ್ನು ಮೀರಿದ ಅವಕಾಶಕ್ಕೆ ದೊರೆತ ಆಹ್ವಾನವನ್ನು ಮನ್ನಿಸಿದೆ.
ಇದೊಂದು ಅದ್ಭುತ ಅನುಭವ ಮತ್ತೊಮ್ಮೆ ಹಲವು ವರ್ಷಗಳಷ್ಟು ಹಿಂದಿನ ಜೀವನವನ್ನು ನೆನಪಿಸಿತು" ಎಂದಿದ್ದಾರೆ
ಬೇರ್ ಗ್ರಿಲ್ಸ್ ಮಾತನಾಡಿ, "ವಿಶ್ವದ ಜನಪ್ರಿಯ ನಾಯಕ, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಬೆರೆಯುವ ಅವಕಾಶ ದೊರಕಿದ್ದು ನಿಜಕ್ಕೂ ಹೆಮ್ಮೆಯ ವಿಷಯ. "ನಾವು ಪರಸ್ಪರ ಪೂರಕವಾಗಿದ್ದು ಒಟ್ಟಿಗೆ ಇದ್ದಾಗ ಬಲಗೊಳ್ಳುತ್ತೇವೆ" ಎಂಬ ಪಾಠವನ್ನು ಪ್ರಕೃತಿ ನಮಗೆ ನೀಡುತ್ತದೆ" ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ
'ಮ್ಯಾನ್ ವರ್ಸಸ್ ವೈಲ್ಡ್' ಪ್ರಥಮ ಪ್ರದರ್ಶನವು ಡಿಸ್ಕವರಿ ಚಾನಲ್, ಡಿಸ್ಕವರಿ ಎಚ್ ಡಿ ವಲ್ರ್ಡ , ಜೀತ್ ಪ್ರೈಮ್ ಎಚ್ ಡಿ, ಡಿಸ್ಕವರಿ ಸೈನ್ಸ್, ಡಿಸ್ಕವರಿ ಟರ್ಬೊ, ಡಿಸ್ಕವರಿ ಕಿಡ್ಸ್ ಮತ್ತು ಡಿ ತಮಿಳ ಚಾನಲ್ ಗಳಲ್ಲಿ, ಬಂಗಾಳಿ, ಇಂಗ್ಲೀಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿರುತ್ತದೆ.
'ಮ್ಯಾನ್ ವರ್ಸಸ್ ವೈಲ್ಡ್' ವಿತ್ ಬೇರ್ ಗ್ರಿಲ್ಸ್ ಮತ್ತು ಪಿಎಂ ಮೋದಿ' ಯನ್ನು ಡಿಸ್ಕವರಿ ಕಮ್ಯುನಿಕೇಷನ್ಸ್ ಇಂಡಿಯಾಕ್ಕಾಗಿ ಬೇರ್ ಗ್ರಿಲ್ಸ್ ವೆಂಚರ್ಸ್ ಅಂಡ್ ಎಲೆಕ್ಟಸ್ ಎ ಪ್ರೊಪಾಗೇಟ್ ಕಂಪನಿಯು ನಿರ್ಮಿಸಿದೆ, ಬೇರ್ ಗ್ರಿಲ್ಸ್, ಡೆಲ್ಬರ್ಟ್ ಶೂಪ್ಮನ್, ರಾಬ್ ಬುಚ್ತಾ ಮತ್ತು ಎಲಿಜಬೆತ್ ಶುಲ್ಜ್ ಕಾರ್ಯನಿರ್ವಾಹಕ ನಿರ್ಮಾಪಕರು ಮತ್ತು ಬೆನ್ ಸಿಮ್ಸ್ ಸಹ-ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.