ನವದೆಹಲಿ, ಜೂನ್ 13, ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 16 ಮತ್ತು 17 ರಂದು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜೂನ್ 16 ಮತ್ತು 17 ರಂದು ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಲಿದ್ದಾರೆ.ಜೂನ್ 16 ರಂದು 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ಪಂಜಾಬ್, ಅಸ್ಸಾಂ, ಕೇರಳ, ಉತ್ತರಾಖಂಡ, ಜಾರ್ಖಂಡ್, ಛತ್ತೀಸಗಢ, ತ್ರಿಪುರಾ, ಹಿಮಾಚಲ, ಚಂಡೀಗಢ, ಗೋವಾ, ಮಣಿಪುರ, ನಾಗಾಲ್ಯಾಂಡ್, ಲಡಾಖ್, ಪುದುಚೆರಿ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ಅಂಡಮಾನ್ ನಿಕೋಬಾರ್, ದಾದ್ರಾ ನಗರ್ ಹವೇಲಿ, ಡಿಯು ದಮನ್, ಸಿಕ್ಕಿಂ ಮತ್ತು ಲಕ್ಷದ್ವೀಪ ರಾಜ್ಯಗಳ ನಾಯಕರೊಂದಿಗೆ ಮಂಗಳವಾರ ಸಮಾಲೋಚನೆ ನಡೆಸಲಿದ್ದಾರೆ.
ಮರುದಿನ ಜೂನ್ 17 ರಂದು 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ರಾಜಾಸ್ತಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ, ಹರಿಯಾಣ, ಜಮ್ಮು - ಕಾಶ್ಮೀರ, ತೆಲಂಗಾಣ, ಒಡಿಶಾ ರಾಜ್ಯಗಳ ನಾಯಕರೊಂದಿಗೆ ಬುಧವಾರ ಸಂವಾದ ನಡೆಸಲಿದ್ದಾರೆ.ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಈ ಸಭೆ ಮಹತ್ವ ಪಡೆದುಕೊಂಡಿದೆ. ಕೊರೊನಾ ಬಿಕ್ಕಟ್ಟಿನ ಕಾರಣ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಯಾದ ನಂತರ ಇದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನಡೆಸುತ್ತಿರುವ ಆರನೇ ಸಭೆಯಾಗಿದೆ. ಪ್ರಸ್ತುತ ದೇಶದಲ್ಲಿ ಹಲವು ಸಡಿಲಿಕೆಗಳೊಂದಿಗೆ ಐದನೇ ಹಂತದ ದಿಗ್ಬಂಧನ ಜಾರಿಯಲ್ಲಿದೆ. ಈ ಅನ್ ಲಾಕ್ 1 ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅನುಕೂಲಕ್ಕಾಗಿ ಮತ್ತು ವ್ಯಾಪಾರ ವಹಿವಾಟಿನ ಚೇತರಿಕೆಗೆ ಹಲವು ನಿರ್ಬಂಧಗಳನ್ನು ಸಡಿಲಿಸಿವೆ. ಸಂಪುಟ ಕಾರ್ಯದರ್ಶಿ ಶುಕ್ರವಾರ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕೊರೊನಾ ಸೋಂಕು ನಿಗ್ರಹಕ್ಕೆ ಸೋಂಕಿತ ಪ್ರದೇಶ, ಪರೀಕ್ಷೆ ಮತ್ತು ಸಂಪರ್ಕ ಪತ್ತೆಗೆ ಗಮನಹರಿಸುವಂತೆ ಹಾಗೂ ಆರೋಗ್ಯ ಸೇವೆ ಹೆಚ್ಚಿಸುವಂತೆ ಸೂಚನೆ ನೀಡಿದ್ದರು.