ನವದೆಹಲಿ, ಫೆ ೨೭: ಪ್ರಧಾನಿ ನರೇಂದ್ರ ಮೋದಿ, ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮೈಂಟ್ ಅವರೊಂದಿಗೆ ದೆಹಲಿಯಲ್ಲಿ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮಾತುಕತೆಯ ನಂತರ ಉಭಯ ದೇಶಗಳು ಹಲವು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಯು ವಿನ್ ಮೈಂಟ್ ಅವರು ನಾಲ್ಕು ದಿನಗಳ ಅಧಿಕೃತ ಭಾರತ ಭೇಟಿಗಾಗಿ ನಿನ್ನೆ ನವದೆಹಲಿಗೆ ಆಗಮಿಸಿದರು.ಮ್ಯಾನ್ಮಾರ್ ಅಧ್ಯಕ್ಷರೊಂದಿಗೆ ಪತ್ನಿ ಡೌ ಚೋ ಚೋ ಆಗಮಿಸಿದ್ದು, ರಾಷ್ಟ್ರಪತಿ ಭವನದ ಬಳಿ ಇಂದು ಬೆಳಗ್ಗೆ ಅವರಿಗೆ ಔಪಚಾರಿಕ ಸ್ವಾಗತ ಕಲ್ಪಿಸಲಾಗಿದೆ.ನಂತರ ಮ್ಯಾನ್ಮಾರ್ ಅಧ್ಯಕ್ಷರು ರಾಜಘಾಟ್ ಗೆ ತೆರಳಿ ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರಿಗೆ ನಮನ ಸಲ್ಲಿಸಲಿದ್ದಾರೆ. ಪ್ರಧಾನಿ ಮೋದಿ ಹಾಗೂ ಮ್ಯಾನ್ಮಾರ್ ಅಧ್ಯಕ್ಷರು ವ್ಯಾಪಕ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವಿಸ್ತರಿಸುವ ಕುರಿತು ಮಾತುಕತೆ ನಡೆಸುವ ಸಾಧ್ಯತೆಯಿದೆ.ಮ್ಯಾನ್ಮಾರ್ನೊಂದಿಗೆ, ಭಾರತ ಧಾರ್ಮಿಕ, ಭಾಷಾ ಮತ್ತು ಜನಾಂಗೀಯ ಸಂಬಂಧ ಹೊಂದಿದ್ದು, ಆಗ್ನೇಯ ಏಷ್ಯಾಕ್ಕೆ ಪ್ರವೇಶ ದ್ವಾರ ಕಲ್ಪಿಸುವ ಹಾಗೂ ಭಾರತಕ್ಕೆ ಹೊಂದಿಕೊಂಡ ಏಕೈಕ ಆಸಿಯಾನ್ ದೇಶವಾಗಿದೆ. ಭಾರತ ತನ್ನ ಪೂರ್ವದತ್ತ ಕ್ರಿಯಾ ಶೀಲವಾಗು, ನೆರೆಹೊರೆ ಮೊದಲು ಎಂಬ ನೀತಿಗಳಿಗೆ ಅನುಗುಣವಾಗಿ ಮ್ಯಾನ್ಮಾರ್ನೊಂದಿಗಿನ ಸಹಕಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.ಮ್ಯಾನ್ಮಾರ್, ಭಾರತದ ಐದನೇ ಅತಿದೊಡ್ಡ ವಾಣಿಜ್ಯ ಭಾಗಿದಾರ ದೇಶವಾಗಿದ್ದು, ಈ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರ ೨೦೧೮-೧೯ರ ಅವಧಿಯಲ್ಲಿ ಶೇ. ೮ ರಷ್ಟು ಬೆಳವಣಿಗೆ ಕಂಡಿದೆ. ಪ್ರಸ್ತುತ ದ್ವಿಪಕ್ಷೀಯ ವ್ಯಾಪಾರ ೭ ೧.೭ ಬಿಲಿಯನ್ ನಷ್ಟಿದೆ. ಮ್ಯಾನ್ಮಾರ್ ಅಧ್ಯಕ್ಷರು ತಮ್ಮ ಭಾರತ ಪ್ರವಾಸದ ವೇಳೆ ಬೋಧ್ ಗಯಾ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.