ನವದೆಹಲಿ, ಮಾ 24, ಕೊರೋನಾ ವೈರಸ್ ಸೋಂಕು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ “ಕೊರೋನಾ ವೈರಾಣು ಸೋಂಕು ಕುರಿತಂತೆ ಪ್ರಮುಖ ಅಂಶಗಳ ಕುರಿತು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತೇನೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಕೊರೋನಾ ವೈರಸ್ ಕುರಿತು ಪ್ರಧಾನಿಯವರ ಎರಡನೇ ಭಾಷಣ ಇದಾಗಲಿದೆ. ಮಾರ್ಚ್ 19 ರಂದು ಮಾಡಿದ ಮೊದಲ ಭಾಷಣದಲ್ಲಿ ಮಾರ್ಚ್ 22ರಂದು “ಜನತಾ ಕರ್ಫ್ಯೂ” ಆಚರಿಸುವಂತೆ ಕರೆ ನೀಡಿದ್ದರು. ದೇಶದಲ್ಲಿ ಹರಡುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಪ್ರಧಾನಿಯವರು ತೀವ್ರ ನಿಗಾ ವಹಿಸಿದ್ದು, ಪ್ರತಿನಿತ್ಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸೋಂಕು ಪೀಡಿತರನ್ನು ಉಪಚರಿಸುತ್ತಿರುವ ವಿವಿಧ ವಲಯಗಳ ಜನರಿಗೆ ಧನ್ಯವಾದ ಅರ್ಪಿಸಲು ಇದೇ 22ರಂದು ಸಂಜೆ 5 ಗಂಟೆಗೆ ಸಾರ್ವಜನಿಕರು ಚಪ್ಪಾಳೆ ತಟ್ಟುವಂತೆ ಮನವಿ ಮಾಡಿದ್ದರು. ಇದಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಆದಾಗ್ಯೂ ದೇಶಾದ್ಯಂತ ನಿರ್ಬಂಧ ಹೇರಿರುವ ಬಗ್ಗೆ ಅನೇಕ ಮಂದಿ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಡಿಸಿರುವ ಮೋದಿ, ಅನಗತ್ಯವಾಗಿ ಮನೆಯಿಂದ ಹೊರಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.