ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮಾ.14 ರಂದು ಯೂರೋಪ್ – ಇಂಡಿಯಾ ಜಾಗತಿಕ ಮಟ್ಟದ ಫಿಂಟೆಕ್ ಶೃಂಗ ಸಭೆ

ಬೆಂಗಳೂರು, ಮಾ, 6, ದೇಶದ ನವೋದ್ಯಮಗಳ ರಾಜಧಾನಿ, ಅನ್ವೇಷಣೆ, ಅನುಶೋಧನೆಗಳ ಕೇಂದ್ರಬಿಂದುವಾದ ಬೆಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ “ ಯೂರೋಪ್ – ಇಂಡಿಯಾ ಜಾಗತಿಕ ಮಟ್ಟದ ಫಿಂಟೆಕ್ ಶೃಂಗ ಸಭೆ ಆಯೋಜಿಸಲಾಗಿದೆ.   ಯುರೋಪ್ ಇಂಡಿಯಾ ಸೆಂಟರ್ ಫಾರ್ ಬ್ಯುಸಿನೆಸ್ ಅಂಡ್ ಇಂಡಸ್ಟ್ರಿ -ಇಐಸಿಬಿಐ, ಸಿವಲೀನ್ ಪ್ರತಿಷ್ಠಾನ ಮತ್ತು ಅಕರ್ ಮ್ಯಾಕ್ಸಸ್ ಪ್ರೈವೈಟ್ ಲಿಮಿಟೆಡ್ ಸಹಯೋಗದಡಿ ನಗರದ ಅಶೋಕ ಹೋಟೆಲ್ ನಲ್ಲಿ ಮಾರ್ಚ್ 14 ರಂದು ಈ ಸಮ್ಮೇಳನ ನಡೆಯುತ್ತಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಇಐಸಿಬಿಐ ಸಂಸ್ಥೆಯ ಅಧ್ಯಕ್ಷ ಸುಜಿತ್ ಎಸ್. ನಾಯರ್,  ದೇಶದ ನವೋದ್ಯಮಗಳಿಗೆ ಆರ್ಥಿಕ, ತಾಂತ್ರಿಕ ನೆರವು, ವ್ಯಾಪಾರ, ವಹಿವಾಟು ನಡೆಸಲು ಸೂಕ್ತ ಸಲಹೆ, ಸೂಚನೆ ನೀಡುವ ಮಹತ್ವದ ವೇದಿಕೆ ಇದಾಗಿದ್ದು, ಔದ್ಯಮಿಕ ಕ್ಷೇತ್ರದಲ್ಲಿ ಇದು ಹೊಸ ಸಂಚಲನ ಸೃಷ್ಟಿಸಲಿದೆ. ಈ ಶೃಂಗ ಸಭೆಯಿಂದ ಉದ್ಯೋಗ ಸೃಷ್ಟಿಗೆ ಆದ್ಯತೆ ದೊರೆಯಲಿದೆ ಎಂದರು.  

ಶೃಂಗ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಂಸದ ತೇಜಸ್ವಿ ಸೂರ್ಯ, ಕಳೆದ 1990 ರಿಂದಲೂ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯರಾಗಿರುವ ಹಾಗೂ ಬೆಂಗಳೂರಿನ ಜತೆ ನಿಕಟ ಬಾಂಧವ್ಯ ಹೊಂದಿರುವ ಲಾರ್ಡ್ ವಾವೆರ್ಲಿ, ಜಗತ್ತಿನ ಪ್ರಮುಖ ಹೂಡಿಕೆದಾರರ ಸಮುದಾಯ, ನೀತಿ ನಿರೂಪಕರು, ಸರ್ಕಾರದ ಅಧಿಕಾರಿಗಳು, ವಕೀಲರು, 350ಕ್ಕೂ ಹೆಚ್ಚು ಪ್ರತಿನಿಧಿಗಳು, ಪ್ರಮುಖ 15 ಕಂಪೆನಿಗಳ ಸಿ.ಇ.ಓಗಳು, ಎಸ್.ಎ.ಪಿ,. ಮೈಕ್ರೋ ಸಾಪ್ಟ್, ಕ್ರಿಡಿಟ್ ಮೆಟ್, ಡಿಜಿಟಲ್ ಕಂಪೆನಿಗಳ ಹಣಕಾಸು ತಜ್ಞರು,.ಕೈಗಾರಿಕಾ ಕ್ಷೇತ್ರದ ಗಣ್ಯರು ಪಾಲ್ಗೊಂಡು ಫಿನ್ ಟೆಕ್ ಜಗತ್ತಿನ ಅವಕಾಶಗಳು, ವ್ಯಾಪಾರ, ವಹಿವಾಟು ವೃದ್ಧಿಸಿಕೊಳ್ಳುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೋಧಿಸಲಿದ್ದಾರೆ ಎಂದರು.   ಹೂಡಿಕೆದಾರರು, ನವೋದ್ಯಮಗಳಿಗೆ ಸ್ಪೂರ್ತಿ ನೀಡುವ, ಫಿನ್ ಟೆಕ್ ನ ಇತ್ತೀಚಿನ ಅಭಿವೃದ್ಧಿ, ಬ್ರೆಕ್ಸಿಟ್ ನಿಂದಾಗಿ “ಬ್ರಿಟನ್ – ಐರೋಪ್ಯ ಒಕ್ಕೂಟ – ಭಾರತ”ದ ಕಾರಿಡಾರ್ ನಲ್ಲಿ ಆಗಿರುವ ಪರಿಣಾಮ, ಯೂರೋಪ್ ನಲ್ಲಿ ಭಾರತೀಯ ಮೂಲದ ಫಿನ್ ಟೆಕ್ ಕಂಪೆನಿಗಳಿಗಿರುವ ಅವಕಾಶಗಳು, ಸ್ಮಾರ್ಟ್ ಆಡಳಿತ ಮತ್ತು ತಂತ್ರಜ್ಞಾನ ವಲಯದ ಸಾಧ್ಯತೆ, ಕೌಶಲ್ಯ ಅಭಿವೃದ್ದಿ ಮತ್ತಿತರ ವಲಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು. ಇಐಸಿಬಿಐ ಸಹಯೋಗದಲ್ಲಿ ನಡೆಯುತ್ತಿರುವ ಫಿನ್ ಟೆಕ್ ಶೃಂಗ ಸಭೆಯಲ್ಲಿ ಕೌಶಲ್ಯ ಅಭಿವೃದ್ದಿ, ಕಾರ್ಯಾಗಾರಗಳು, ಸಂವಾದ ಗೋಷ್ಠಿಗಳನ್ನು ಸಹ ಆಯೋಜಿಸಲಾಗಿದೆ. ನವೋದ್ಯಮಗಳ ಜತೆ ಇದು ಸಂಪರ್ಕ ಸೇತುವಾಗಲು ಈ ಸಭೆ ಉತ್ತಮ ವೇದಿಕೆಯಾಗಿದ್ದು, ನವೋದ್ಯಮಗಳ ಉತ್ತಮ ಉಪಾಯಗಳು, ಉತ್ಪನ್ನಗಳಿದ್ದರೆ ಅಂತಹ ನೋವೋದ್ಯಮಗಳಿಗೆ ಸೂಕ್ತ ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.