ಶ್ರೀಲಂಕಾದಲ್ಲಿ ಸಂಸತ್ ವಿಸರ್ಜನೆ, ಏಪ್ರಿಲ್ 25 ರಂದು ಹೊಸ ಚುನಾವಣೆ ಕೊಲಂಬೊ,

ಕೊಲಂಬೊ, ಮಾರ್ಚ್ 3, ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ಸಂಸತ್ತನ್ನು ವಿಸರ್ಜಿಸಿ, ಹೊಸ ಚುನಾವಣೆ ಮುಂದಿನ ಏಪ್ರಿಲ್ 25 ರಂದು ನಡೆಯಲಿದೆ ಎಂದು ಘೋಷಿಸಿದ್ದಾರೆ . ರಾಷ್ಟ್ರಪತಿ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ವಿಶೇಷ ಗೆಜೆಟ್ನಲ್ಲಿ, ರಾಜಪಕ್ಸೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸಂಸತ್ತನ್ನು ವಿಸರ್ಜಿಸಿ ಮೇ 14 ರಂದು ಹೊಸ ಸಂಸತ್ ಸಭೆ ಸೇರಲು ಹೇಳಿದ್ದಾರೆ. ಮುಂಬರುವ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸುಲು ಮಾರ್ಚ್ 12 ರಿಂದ ಮಾರ್ಚ್ 19 ರವರೆಗೆ ಅವಕಾಶವಿದೆ ,ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಗೆಜೆಟ್ ನಲ್ಲಿ ತಿಳಿಸಲಾಗಿದೆ. ಶ್ರೀಲಂಕಾದ ಸಂಸತ್ತನ್ನು ನಾಲ್ಕುವರೆ ವರ್ಷಗಳ ನಂತರ ವಿಸರ್ಜಿಸಲಾಗುತ್ತಿದ್ದು ,ಹೊಸದಾಗಿ 225 ಸದಸ್ಯರನ್ನು ಆಯ್ಕೆ ಮಾಡಲು ಮತದಾನಕ್ಕೆ ದಾರಿ ಮಾಡಿಕೊಡಲಾಗಿದೆ. ವಿಸರ್ಜನೆಯ ಅವಧಿಯಲ್ಲಿ, ದೇಶವನ್ನು ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸೆ ಮತ್ತು ಮಂತ್ರಿಗಳ ಸಂಪುಟದೊಂದಿಗೆ ಉಸ್ತುವಾರಿ ಸರ್ಕಾರ ನಡೆಸಲಿದೆ ಎಂದು ರಾಜಕೀಯ ತಜ್ಞರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ , ಎಲ್ಲಾ ರಾಜ್ಯ ಸಚಿವರು ಮತ್ತು ಉಪ ಮಂತ್ರಿಗಳು ತಮ್ಮ ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆ. ಅಂದಾಜು ಒಂದು ಕೋಟಿ 16 ಲಕ್ಷ ಮತದಾರರರು ಬರುವ ಏಪ್ರಿಲ್ ಚುನಾವಣೆಯಲ್ಲಿ ಮತ ಚಲಾಯಿಸುವ ನಿರೀಕ್ಷೆಯಿದೆ.