ಮಾಧ್ಯಮದವರನ್ನು ದೂರವಿಟ್ಟು ಪ.ಪಂ. ಸಾಮನ್ಯ ಸಭೆ: ಭ್ರಷ್ಟಾಚಾರ ಮುಚ್ಚಿಕೊಳ್ಳುವ ಯತ್ನ : ವಿಪ ಸದಸ್ಯರು ಆರೋಪ

ಮಾಧ್ಯಮದವರನ್ನು ದೂರವಿಟ್ಟು ಪ.ಪಂ. ಸಾಮನ್ಯ ಸಭೆ: ಭ್ರಷ್ಟಾಚಾರ ಮುಚ್ಚಿಕೊಳ್ಳುವ ಯತ್ನ : ವಿಪ ಸದಸ್ಯರು ಆರೋಪ P.P. General Meeting: Attempt to cover up corruption by keeping the media away: Opposition members a

ನರೇಗಲ್ 04: ಸ್ಥಳೀಯ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಕಡತಗಳ ಜತೆ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಕೋಟ್ಯಂತರ ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ವಿಪಕ್ಷಗಳು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಪಟ್ಟಣ ಪಂಚಾಯ್ತಿ ಭವನದಲ್ಲಿ ಅಧ್ಯಕ್ಷ ಫಕೀರ​‍್ಪ ಮಳ್ಳಿಯವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಗೆ ಮಾಧ್ಯಮದವರನ್ನು ಆಹ್ವಾನಿಸದೇ ದೂರವಿಟ್ಟು ಸಭೆ ನಡೆಸುವ ಮೂಲಕ ಹಲವು ಅನುಮಾನಕ್ಕೆ ಎಡೆಮಾಡಿದೆ. 

 ಇಷ್ಟು ವರ್ಷ ಎಷ್ಟೇ ಸಾಮಾನ್ಯ ಸಭೆ ನಡೆದರು ಸಹ ಮಾಧ್ಯಮದವರನ್ನು ಕರೆಯುತ್ತಿದ್ದರು, ಆದರೆ ಇತ್ತೀಚೆಗೆ ನಡೆದ ಸಭೆಗೆ ಮಾಧ್ಯಮದವರನ್ನು ಹೊರಗಿಡುವ ಮೂಲಕ ಸಭೆಯಲ್ಲಿ ನಡೆಯುವ ವಿಷಯಗಳು ಜನತೆಗೆ ತಲುಪಬಾರದು ಎಂಬ ಧೋರಣೆ ಆಡಳಿತದ್ದಾಗಿದೆ. ಆಡಳಿತ ಯಂತ್ರದಲ್ಲಿ ಪಾರದರ್ಶಕತೆ ಕಂಡು ಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ. ಸರ್ವ ಪಕ್ಷ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮಿಷ್ಟದಂತೆ ಆಡಳಿತ ನಡೆಸುತ್ತಿರುವುದು ಖಂಡನೀಯ ಎಂದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. 

 ಪಟ್ಟಣ ಪಂಚಾಯ್ತಿ ಸಭೆ, ಸಮಾರಂಭಗಳಿಗೆ ಪತ್ರಕರ್ತರನ್ನು ಕರೆಸಿ ತಾವು ಕೈಗೊಂಡ ಅಭಿವೃದ್ಧಿ ಕೆಲಸ ಕಾರ್ಯಗಳು ವಿಷಯದ ಚರ್ಚೆ, ಜನೋಪಕಾರ್ಯಗಳು ಜನರಿಗೆ ತಿಳಿಸುವುದು ನಡೆದು ಕಂಡು ಬಂದಿರುವ ಪರಂಪರೆಯನ್ನು ಈಗಿನ ಆಡಳಿತ ಮುರಿದಿದೆ. ಆಡಳಿತದಲ್ಲಿ ಪಾರದರ್ಶಕತೆ ಇರದೇ ಜನರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಆಡಳಿತ ಪಕ್ಷದ ಅವ್ಯವಹಾರ, ಬ್ರಷ್ಟಾಚಾರ ಮುಚ್ಚಿಕೊಳ್ಳಲು ಹೀಗೆ ಮಾಡಿದ್ದಾರೆ. ಪಟ್ಟಣದಲ್ಲಿ ಜನರಿಂದ ವಸೂಲಿ ಮಾಡಿದ ಹಣವನ್ನು ಸ್ಥಳೀಯ ಆಡಳಿತದ ನಿರ್ಲಕ್ಷ್ಯತನದಿಂದ ಕೋಟ್ಯಂತರ ಹಣ ಪೋಲಾಗುತ್ತಿದೆ. ಆಡಳಿತಕ್ಕೆ ನಡೆಸುವವರಿಗೆ ಪಟ್ಟಣದ ಅಭಿವೃದ್ಧಿ ಬೇಕಾಗಿಲ್ಲ. ಸಭೆಯಲ್ಲಿ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜತೆಗೆ ಸಭೆಗೆ ಮಾಧ್ಯಮದವರಿಗೆ ಆಹ್ವಾನ ನೀಡದೆ ಕೆಲ ಪಟ್ಟಭದ್ರ ಹಿತಾಸಕ್ತಿಗೆ ಪಟ್ಟಣ ಅಭಿವೃದ್ಧಿಯತ್ತ ಚಿತ್ತ ಹರಿಸದೆ ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ ಎಂದು ವಿಪಕ್ಷ ಸದಸ್ಯ ಮಲ್ಲಿಕಾರ್ಜುನಗೌಡ ಭೂಮಗೌಡ್ರ ದೂರಿದರು. 

 ಸಾಮಾನ್ಯ ಸಭೆಯ ಮೊದಲು ಚರ್ಚೆ ಮಾಡಲು, ಅಜೆಂಡಾ ರೇಡಿ ಮಾಡಿಕೊಂಡು ಚರ್ಚಿಸಲು ಪೂರ್ವಬಾವಿ ಸಭೆ ಕರೆಯುವಂತೆಯು ಅನೇಕಬಾರಿ ತಿಳಿಸಿರುವೆ. ತಮಗೆ ಇಷ್ಟ ಬಂದಾಗ ಸಭೆ ಕರೆಯುತ್ತಿರುವುದು ಹಲವು ಗುಮಾನಿಗಳಿಗೆ ಎಡೆಮಾಡಿ ಕೊಟ್ಟಿದೆ. ಈ ಬಾರಿ ನಮ್ಮನ್ನು ಸಹ ಸಭೆಗೆ ಕಡೆಗಣಿಸಲಾಗಿದೆ. ಪ್ರತಿಬಾರಿಯಂತೆ ಮಾಹಿತಿ ತಿಳಿಸದೆ ಲಕೋಟಿ ಕಳುಹಿ ಸಭೆ ಇದೆ ಎಂದು ಹೇಳಿದ್ದಾರೆ. ಸಭೆ ದಿನ ಬೆಳಿಗ್ಗೆ ಅಜಂಡಾ ಹಾಗೂ ಇತರೆ ಮಾಹಿತಿ ಕೊಡಲು ಬಂದಿದ್ದಾರೆ. ಇದರಿಂದ ಚರ್ಚೆಯಲ್ಲಿ ಭಾಗವಹಿಸಲು ಹಾಗೂ ನಮ್ಮನ್ನು ಹಕ್ಕನ್ನು ಕೇಳಲು ಆಗದಂತೆ ಮಾಡಿದ್ದಾರೆ. ಇನ್ನೊಂದೆಡೆ ಹಿಂದಿನ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಕೆಲ ವಿಷಯಗಳು ಜನರ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದವು. ಕೆಲ ಸದಸ್ಯರು ಕೇಳಿದ ಪ್ರಶ್ನೆಯಿಂದ ಉತ್ತರ ನೀಡಿರಲಿಲ್ಲ ಹೀಗಾಗಿ ಅಭಿವೃದ್ದಿ ಕಾರ್ಯಗಳು ನಡೆಯದೇ ಜನರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ವಿಷಯಗಳನ್ನು ಪ್ರಶ್ನೆ ಕೇಳುತ್ತೇವೆ ಎನ್ನುವ ಕಾರಣಕ್ಕೆ ನೆಪಕ್ಕೆ ಮಾತ್ರ ನಮಗೆ ಆಹ್ವಾನ ನೀಡುವ ತರಾ ಮಾಡಿದ್ದಾರೆ ಹಾಗೂ ಪತ್ರಕರ್ತರನ್ನು ದೂರವಿಟ್ಟು ಸಭೆ ಮಾಡಿದ್ದಾರೆ ಎಂದು ವಿಪ ಸದಸ್ಯೆ ಜ್ಯೋತಿ ಪಾಯಪ್ಪಗೌಡ್ರ ಆರೋಪಿಸಿದರು. 

ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ 

ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲಾದ ಪತ್ರಿಕಾ ಸ್ವಾತಂತ್ರ್ಯ ಅಥವಾ ಮಾಧ್ಯಮದ ಸ್ವಾತಂತ್ರ್ಯವು ಮೂಲಭೂತ ತತ್ವವಾಗಿದ್ದು, ಮುದ್ರಿತ ಮತ್ತು ವಿದ್ಯುನ್ಮಾನ ಮಾಧ್ಯಮಗಳು , ವಿಶೇಷವಾಗಿ ಪ್ರಕಟಿತ ವಸ್ತುನಿಷ್ಠ ಸುದ್ದಿಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಸಂವಹನ ಮತ್ತು ಅಭಿವ್ಯಕ್ತಿಯನ್ನು ಮುಕ್ತವಾಗಿ ಚಲಾಯಿಸುವ ಹಕ್ಕನ್ನು ಹೊಂದಿದೆ. ಆದರೆ ಸಾಮಾನ್ಯ ಸಭೆಯಿಂದ ಪತ್ರಕರ್ತರನ್ನು ದೂರವಿಟ್ಟು ನಡೆಸುವ ಮೂಲಕ ತಮ್ಮ ಅವ್ಯವಹಾರ, ಕರ್ಮಕಾಂಡ ಮುಚ್ಚಿಕೊಳ್ಳುವ ಪ್ರಯತ್ನಕ್ಕೆ ಈಗಿನ ಮುಖ್ಯಾಧಿಕಾರಿ ಮಹೇಶ ಬಿ. ನಿಡಶೇಶಿ, ಅಧ್ಯಕ್ಷ ಫಕೀರ​‍್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ ಹಾಗೂ ಕೆಲವು ಸದಸ್ಯರು ಮುಂದಾಗಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ಮಾಧ್ಯದವರು ಕೇಳಲು ಹೋದರು ಅಧ್ಯಕ್ಷರು ಆಹ್ವಾನಿಸಬೇಡ ಎಂದಿದ್ದರು ಎಂದು ಮುಖ್ಯಾಧಿಕಾರಿ ಹೇಳಿದರೆ ಹಾಗೂ ಮುಖ್ಯಾಧಿಕಾರಿನೆ ಬೇಡವೆಂದರು ಎಂದು ಅಧ್ಯಕ್ಷರ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ.