ಪಂ. ಪುರಾಣಿಕಮಠ ಸಹೃದಯತೆ, ಔದಾರ್ಯಗಳು ಅನುಕರಣೀಯ: ಹೆಗಡೆ

ಧಾರವಾಡ 29: ಸ್ವತಃ ಹಿರಿಯ ಸಂಗೀತಗಾರರಾಗಿಯೂ ಇತರ ಸಂಗೀತಗಾರರ ಗಾಯನವನ್ನು ಆಸಕ್ತಿಯಿಂದ ಆಲಿಸುತ್ತಿದ್ದ ಪಂ. ಚಂದ್ರಶೇಖರ ಪುರಾಣಿಕಮಠ ಗುರುಗಳ ಸಹೃದಯತೆ, ಔದಾರ್ಯಗಳು ಅನುಕರಣೀಯವಾಗಿದ್ದು, ಯಾವುದೇ ಅಹಮಿಕೆಯಿರದ ಈ ಹಿರಿಯ ಚೇತನರ ಜೀವನಾದರ್ಶಗಳು ನಮಗೆಲ್ಲ ದಾರಿದೀಪವಾಗಲಿ ಎಂದು ಜೆ.ಎಸ್.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಸ್.ಎನ್. ಹೆಗಡೆ ಹಾರೈಸಿದರು.

ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿಸಭಾದ ಆಶ್ರಯದಲ್ಲಿ ಸಾಧನಕೇರಿಯ `ಗುರುಕೃಪಾ'ದ ಸಭಾಂಗಣದಲ್ಲಿ ದಿ. 28ರಂದು ಜರುಗಿದ ಖ್ಯಾತ ಹಿಂದುಸ್ತಾನೀ ಗಾಯಕ ಪಂ. ಚಂದ್ರಶೇಖರ ಪುರಾಣಿಕಮಠ ಗುರುಗಳ 9ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. 

ತಬಲಾ ವಿದ್ವಾನರೂ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆದ ಬೆಳಗಾವಿಯ ಪಂ. ಬಂಡೋಪಂತ ಕುಲಕರ್ಣಿ ಇವರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು. ಗುರುಪತ್ನಿ ಶಾಂತಮ್ಮ ಪುರಾಣಿಕಮಠ, ಸ್ಮೃತಿಸಭಾ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಟಿ. ಪರಾಂಜಪೆ ಮುಂತಾದವರು ವೇದಿಕೆಯಲ್ಲಿದ್ದರು.

ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಡಾ. ಸುಮಿತ್ರಾ ಕಾಡದೇವರಮಠ ಹಿಂದುಸ್ತಾನೀ ಗಾಯನದಲ್ಲಿ ರಾಗ ಪೂರಿಯಾ ಹಾಗೂ ಇನ್ನೋರ್ವ ಖ್ಯಾತ ಕಲಾವಿದ ಡಾ. ಮಲ್ಲಿಕಾರ್ಜುನ ತರ್ಲಗಟ್ಟಿಯವರು ಸಿತಾರದಲ್ಲಿ ರಾಗ ಕೀರ್ವಾಣಿ ಹಾಗೂ ಭೈರವಿ ರಾಗಗಳನ್ನು ಆಪ್ಯಾಯಮಾನವಾಗಿ ನುಡಿಸಿ ಶ್ರೋತುೃಗಳನ್ನು ರಂಜಿಸಿದರು. ಈ ಕಲಾವಿದರಿಗೆ ತಬಲಾದಲ್ಲಿ ಅಂಗದ ದೇಸಾಯಿ ಮತ್ತು ಶಾಂತಲಿಂಗ ದೇಸಾಯಿ ಕಲ್ಲೂರ, ತಂಬೂರಾದಲ್ಲಿ ನಾಗರತ್ನಾ ಹಾಗೂ ಹಾರ್ಮೊನಿಯಂದಲ್ಲಿ ಅರ್ಜುನ ವಠಾರ ಉತ್ತಮ ಸಾಥ್ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಟಿ. ಪರಾಂಜಪೆಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಜೋಶಿ ನಿರೂಪಿಸಿದರು. ಅರ್ಜುನ ವಠಾರ ವಂದಿಸಿದರು.

ಗಣ್ಯರಾದ ಪಂ. ಶಿವಾನಂದ ತರ್ಲಗಟ್ಟಿ, ಡಾ. ಶಾಂತಾರಾಮ ಹೆಗಡೆ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಜಗದೀಶ ಕಾಡದೇವರಮಠ, ಡಾ. ಗಿರೀಶ ಕಾಮತ, ಡಾ. ಸುನೀಲ ಕುಮಾರ, ವಿ.ಎಲ್. ಪಾಟೀಲ, ಗಜಾನನ ಹೆಗಡೆ, ಶಿವಯೋಗಿ ಪುರಾಣಿಕಮಠ, ಕೆ.ವಿ. ಹಾವನೂರ, ಅರುಣ ಕುಲಕರ್ಣಿ, ಹೇಮಂತ ಲಮಾಣಿ, ಡಿ.ವಿ. ಕುಲಕರ್ಣಿ, ಬಸವರಾಜ ಹೂಗಾರ, ವಿನೋದ ಪಾಟೀಲ, ಪಂಚಮ ಉಪಾಧ್ಯಾಯ, ಶಮಂತ ದೇಸಾಯಿ, ಪ್ರತಿಭಾ ಹೆಗಡೆ ಹಾಗೂ ಶಿಷ್ಯವೃಂದದವರು ಮತ್ತು ಅನೇಕ ಸಂಗೀತಾಸಕ್ತರು ಉಪಸ್ಥಿತರಿದ್ದರು.