ಕೇಪ್ ಟೌನ್, ಮೇ 8, ದಕ್ಷಿಣ ಆಫ್ರಿಕಾದಲ್ಲಿ ಗುರುವಾರ 424 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 8,232 ಕ್ಕೆ ಏರಿಕೆಯಾಗಿದೆ.ಈ ಮಧ್ಯೆ 8 ಜನರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 161 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಜ್ವೇಲಿ ಕೇಜಿ ಹೇಳಿದ್ದಾರೆ.ಎಂಟು ಸಾವುಗಳ ಪೈಕಿ ಆರು ಸಾವಿನ ಪ್ರಕರಣಗಳು ಪಶ್ಚಿಮ ಕೇಪ್ ಪ್ರಾಂತ್ಯದಿಂದ ವರದಿಯಾಗಿದ್ದು ಕ್ವಾಜುಲು ನೇಟಲ್ ಪ್ರಾಂತ್ಯದ ಇಬ್ಬರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಕಾರಣ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಪರೀಕ್ಷಾ ಕಿಟ್ ನೀಡಿ ಸಿದ್ಧಗೊಳಿಸಲಾಗುತ್ತಿದೆ. ಈವರೆಗೆ ದೇಶಾದ್ಯಂತ 2,92,153 ಪರೀಕ್ಷೆಗಳನ್ನು ನಡೆಸಲಾಗಿದ್ದು ಕಳೆದ 24 ಗಂಟೆಗಳಲ್ಲಿ 12,774 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಕೋವಿಡ್ – 19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಜಗತ್ತಿನಾದ್ಯಂತ ಈವರೆಗೆ 38 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದು 2,69,000 ಜನರು ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.