ಮಾಸ್ಕೋ, ಅ 19: ಲೆಬನಾನ್ ರಾಜಧಾನಿ ಬೈರುತ್ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಅಲ್ಲಿನ ಭದ್ರತಾ ಪಡೆಗಳ ಕನಿಷ್ಠ 52 ಯೋಧರು ಗಾಯಗೊಂಡಿದ್ದು, ಈ ಸಂಬಂದ 70 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲೆಬನಾನ್ ಆಂತರಿಕ ಭದ್ರತಾ ಪಡೆ (ಐಎಸ್ಎಫ್) ತಿಳಿಸಿದೆ. ಕಳೆದ ಗುರುವಾರದಿಂದ, ಬೈರುತ್ ಮತ್ತು ಇತರ ನಗರಗಳಲ್ಲಿ ಸರ್ಕಾರದ ರಾಜೀನಾಮೆ ಮತ್ತು ದೇಶದ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರು ಪ್ರಮುಖ ಹೆದ್ದಾರಿಗಳನ್ನು ತಡೆದಿದ್ದಾರೆ. ಮಧ್ಯ ಬೈರುತ್ನಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಮಾರಕ ವಸ್ತುಗಳನ್ನು ಪೊಲೀಸರ ಮೇಲೆ ಎಸೆದಿದ್ದರಿಂದ ಪ್ರತಿಭಟನಾ ಮೆರವಣಿಗೆ ಹಿಂಸಾರೂಪ ತಳೆಯಿತು. ಭದ್ರತಾ ಪಡೆಗಳು ಸ್ಟನ್ ಗ್ರೆನೇಡ್, ರಬ್ಬರ್ ಗುಂಡುಗಳು ಮತ್ತು ಅಶ್ರುವಾಯು ಪ್ರಯೋಗಿಸಿದವು. ಈ ವೇಳೆ ನಡೆದ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಐಎಸ್ಎಫ್ನ ಮಹಾ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. 'ಗಾಯಗೊಂಡ ಆಂತರಿಕ ಭದ್ರತಾ ಪಡೆಗಳ ಸಿಬ್ಬಂದಿ ಸಂಖ್ಯೆ 52 ಕ್ಕೆ ಏರಿದೆ. ಬೈರುತ್ನಲ್ಲಿ ವಿಧ್ವಂಸಕ ಕೃತ್ಯ, ಅಗ್ನಿಸ್ಪರ್ಶ ಮತ್ತು ದರೋಡೆ ಕೃತ್ಯಗಳಲ್ಲಿ ನಿರತರಾಗಿದ್ದ 70 ಜನರನ್ನು ವಶಕ್ಕೆ ಪಡೆಯಲಾಗಿದೆ' ಎಂದು ಭದ್ರತಾ ಪಡೆಗಳು ಟ್ವಿಟರ್ನಲ್ಲಿ ತಿಳಿಸಿವೆ.