ವಾಷಿಂಗ್ಟನ್, ಏಪ್ರಿಲ್ 20, ಪಾಶ್ಚಿಮಾತ್ಯ ರಾಷ್ಟ್ರ ಅಮೆರಿಕದಲ್ಲಿ ಈಗಾಗಲೇ 40,000 ಕ್ಕೂ ಜನರನ್ನು ಬಲಿ ತೆಗೆದುಕೊಂಡಿರುವ ಮಾರಕ ಕರೋನವೈರಸ್ ಸೋಂಕಿಗೆ ಕಳೆದ 24 ತಾಸಿನಲ್ಲಿ ಇನ್ನೂ ಸುಮಾರು 2,000 ಜನರು ಸಾವನ್ನಪ್ಪಿದ್ದಾರೆ.ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ನವೀಕೃತ ವರದಿಯಂತೆ ಹೊಸದಾಗಿ 1,997 ಸಾವು ಸೇರಿ 26,800 ಕ್ಕೂ ಹೆಚ್ಚು ಕರೋನವೈರಸ್ ಪ್ರಕರಣಗಳು ದೃಢಪಟ್ಟಿವೆ.ಈ ಮಧ್ಯೆ, ದೇಶದಲ್ಲಿ ಸೋಂಕು ಉಲ್ಬಣಗೊಂಡಾಗಿನಿಂದ ಅಮೆರಿಕದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 7,59,000 ರಷ್ಟಿದೆ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿದೆ. ದೇಶದಲ್ಲಿ ಈವರೆಗೆ 70,000 ಕ್ಕೂ ಹೆಚ್ಚು ಜನರು ರೋಗದಿಂದ ಗುಣಮುಖರಾಗಿದ್ದಾರೆ.
ಶ್ವೇತಭವನದಲ್ಲಿ ಕೊರೊನಾವೈರಸ್ ಕಾರ್ಯಪಡೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್, ನಿರ್ಬಂಧಗಳಿಂದ ಹೊರಬಂದು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲು ಯಾವುದೇ ರಾಜ್ಯ ಮೊದಲ ಹಂತಕ್ಕೆ ಹೋಗಬೇಕಾದರೆ, ಈ ರಾಜ್ಯಗಳು ಮಾನದಂಡಗಳನ್ನು ಪೂರೈಸಿರಬೇಕು. ಕರೋನವೈರಸ್ ಪ್ರಕರಣಗಳಲ್ಲಿ 14 ದಿನಗಳ ಸ್ಥಿರ ಕುಸಿತ ಮತ್ತು ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸುವ ಪ್ರಮಾಣ ಹೆಚ್ಚಿಸಬೇಕು ಎಂದು ಹೇಳಿದ್ದಾರೆ. ನ್ಯೂಯಾರ್ಕ್ ನಲ್ಲಿ 9 ದಿನಗಳ ಅವಧಿಯಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ 50ರಷ್ಟು ಕುಸಿತ ಕಂಡುಬಂದಿದೆ. ಸಿಯಾಟಲ್, ಡೆಟ್ರಾಯಿಟ್ ಮತ್ತು ನ್ಯೂ ಓರ್ಲಿಯನ್ಸ್ ರಾಜ್ಯಗಳಲ್ಲೂ ಸೋಂಕಿನ ಪ್ರಕರಣಗಳಲ್ಲಿ ಇಳಿಮುಖವಾಗತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.