ಓದುವದರಿಂದಲೇ ನಮ್ಮ ಜ್ಞಾನಶಾಖೆ ವೃದ್ಧಿ : ಡಾ. ಪಿ. ಜಿ. ತಡಸದ

ಓದುವದರಿಂದಲೇ ನಮ್ಮ ಜ್ಞಾನಶಾಖೆ ವೃದ್ಧಿ : ಡಾ. ಪಿ. ಜಿ. ತಡಸದ  Our knowledge grows through reading: Dr. P. G. Tadasa

           ಬೆಳಗಾವಿ, 17 : ನಮ್ಮ ಜೀವನ ಕಲಿಕೆಯ ಪ್ರಕ್ರಿಯೆಗೆ ಓದು ಬಹಳ ಮುಖ್ಯ. ಪ್ರತಿಕ್ಷಣ ತಾಂತ್ರಿಕತೆಯಿಂದ  ಬದಲಾಗುತ್ತಿರುವ ಸದ್ಯದ ಕಾಲಘಟ್ಟದಲ್ಲಿ ಯಾವುದನ್ನು ಕುರುಡಾಗಿ ನಂಬದೆ, ಓದುವ ರೂಡಿಯಿಂದ ನಮ್ಮ ಜ್ಞಾನಶಾಖೆ ಮತ್ತು ಬದುಕಿನ ಕೌಶಲ್ಯಗಳನ್ನು ವಿಸ್ತರಿಸಕೊಳ್ಳಬೇಕು ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಪಿ. ಜಿ. ತಡಸದ ಹೇಳಿದರು.   ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ವಿಶ್ವವಿದ್ಯಾಲಯ ಗ್ರಂಥಾಲಯ ವತಿಯಿಂದ ದಿನಾಂಕ:17/11/2025 ಸೋಮವಾರದಂದು ಆಯೋಜಿಸಿದ "ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ" ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

        ಪ್ರಸ್ತುತ ಸಮಯದಲ್ಲಿ ವಿದ್ಯಾರ್ಥಿಗಳು ಓದಿನ ಮುಖ್ಯ ಉದ್ದೇಶವಾದ ಜ್ಞಾನರ್ಜನೆಯನ್ನು ಮರೆತು ಕೇವಲ ಪರೀಕ್ಷೆಗಳಿಗಾಗಿ ಓದುತ್ತಿದ್ದಾರೆ, ಬದಲಿಗೆ ಓದು ಒಂದು ಕೌಶಲ್ಯವೆಂದು ಅರಿತು, ಓದುವುದರ ಜೊತೆಗೆ ಟಿಪ್ಪಣಿ ಬರೆಯುವುದು, ಬರವಣಿಗೆ, ಮಾತುಗಾರಿಕೆ ಮುಂತಾದವುಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಈ "ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ”  ಮುಖ್ಯ ಉದ್ದೇಶ ಓದುಗರನ್ನ ಗ್ರಂಥಾಲಯದ ಕಡೆ ಸೆಳೆದು, ಪ್ರತಿಯೊಬ್ಬರೂ ಗ್ರಂಥಾಲಯದ ಪ್ರಯೋಜನ ಪಡೆಯುವಂತೆ ಮಾಡುವುದು ಎಂದು ಹೇಳಿದರು.   

         ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾದ ಬೆಂಗಳೂರಿನ ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯದ ಮುಖ್ಯಸ್ಥ ಡಾ. ಶಿವರಾಂ ಬಿ. ಎಸ್ ಶೈಕ್ಷಣಿಕ ಗ್ರಂಥಾಲಯ ಪರಿಸರ ವ್ಯವಸ್ಥೆಯ ಪುನರ್ವ್ಯಾಖ್ಯಾನ:  ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಮೇಲೆ  ಮಾತನಾಡಿ, ಜ್ಞಾನ ಮತ್ತು ಮಾಹಿತಿ ಪಡೆಯಲು ಗ್ರಂಥಾಲಯಗಳು ಬಹು ಮುಖ್ಯವಾದ ಬೆಂಬಲ ವ್ಯವಸ್ಥೆಯಾಗಿ ನೆರವಾಗುತ್ತವೆ. ಈಗಿನ  ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಸತ್ಯಾಸತ್ಯತೆ ತಿಳಿಯುವುದು ಬಹಳ ಮುಖ್ಯ. ಗ್ರಂಥಾಲಯಗಳು ಓದುಗರಿಗೆ ಜ್ಞಾನವನ್ನು ಒದಗಿಸುವುದರ ಪರಿಪೂರ್ಣ ಅನುಭವವನ್ನ ನೀಡಬೇಕು ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಕೋಶದ ನಿರ್ದೇಶಕ ಡಾ. ಅಶೋಕ್ ಡಿಸೋಜಾ ಮಾತನಾಡಿ, ಗ್ರಂಥಾಲಯದಲ್ಲಿನ ಪುಸ್ತಕಗಳನ್ನ ಎಣಿಸಬಹುದು ಆದರೆ ಅದರಿಂದ ಪಡೆಯುವ ಜ್ಞಾನವನ್ನು ಎಣಿಸಲು ಅಸಾಧ್ಯವಾದದ್ದು ಆದ್ದರಿಂದ ಗ್ರಂಥಾಲಯಗಳು, ಮಾನವ ಸಂವೇದನೆಯ ನೆಲೆಯಲ್ಲಿ  ಸಂಪನ್ಮೂಲ ವೃದ್ಧಿ ಕಡೆ ಗಮನ ನೀಡಬೇಕು ಎಂದು ಹೇಳಿದರು.   

           ಕಾರ್ಯಕ್ರಮದಲ್ಲಿ ಡಾ.ವಿಶ್ವನಾಥ ಆವಟಿ ಡೀನರು, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ.ಸಿಂಡಿಕೇಟ್ ಸದಸ್ಯರಾದ ಡಾ.ವಿಜಯಲಕ್ಷ್ಮಿ ಶೀಗಿಹಳ್ಳಿ ಹಾಗೂ ವಿವಿಧ ವಿಭಾಗಗಳ ಭೋದಕ ಸಿಬ್ಬಂದಿಗಳು, ಬೆಳಗಾವಿ ನಗರದ ಮಹಾವಿದ್ಯಾಲಯಗಳ ಗ್ರಂಥಪಾಲಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.  ಡಾ. ಕಿರಣ್ ಪಿ ಸವಣೂರ, ಮುಖ್ಯಸ್ಥರು,ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಇವರು ಸ್ವಾಗತಿಸಿದರು. ಡಾ ರಮೇಶ್‌.ಬಿ.ಕುರಿ..ಸಹಾಯಕ ಪ್ರಾಧ್ಯಾಪಕರು. ಪರಿಚಯಿಸಿದರು. ಡಾ. ಭವಾನಿಶಂಕರ್ ಬಿ. ಉಪ ಗ್ರಂಥಪಾಲಕರು ವಂದಿಸಿದರು. ಅತಿಥ ಉಪನ್ಯಾಸಕರಾದ  ಸೋಮನಗೌಡ ಪಾಟೀಲ ಇವರು ಕಾರ್ಯಕ್ರಮ ನಿರೂಪಿಸಿದರು.