ನವದೆಹಲಿ, ಏ 6, ಕೋವಿಡ್ 19 ವಿರುದ್ಧ ದೇಶದ 130 ಕೋಟಿ ಜನ ಹೋರಾಟ ಮಾಡುತ್ತಿದ್ದು, ನಮ್ಮೆಲ್ಲರ ನಮ್ಮ ಗುರಿ, ಸಂಕಲ್ಪ, ಮಂತ್ರ ಕೊರೋನಾ ವಿರುದ್ಧ ಜಯ ಸಾಧಿಸುವುದೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿಯ 40ನೇ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ಮನುಕುಲಕ್ಕೆ ಮಾರಕವಾಗಿರುವ ಕೊರೋನಾ ವೈರಸ್ ಅನ್ನು ಸೋಲಿಸಬೇಕು. 130 ಕೋಟಿ ಜನರ ಜೀವ ರಕ್ಷಣೆ ಮಾಡಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದರು.
ಇಂತಹ ಹೋರಾಟದಲ್ಲಿ ಪಕ್ಷದ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದ್ದು, ಬಡವರಿಗೆ ಆಹಾರ ಒದಗಿಸಲು ಮುಂದಾಗಬೇಕು. ಹಸಿವಿನಿಂದ ಯಾರೂ ಕೂಡ ಬಳಲುವಂತಾಗಬಾರದು. ಜನತೆ ಮನೆಗಳಲ್ಲಿಯೇ ಮಾಸ್ಕ್ ಗಳನ್ನು ತಯಾರಿಸಿ ಕನಿಷ್ಠ ಐದು ಜನರಿಗೆ ಮುಖಗವಸುಗಳನ್ನು ವಿತರಿಸಬೇಕು. ಇಂತಹ ಕಠಿಣ ಸಮಯದಲ್ಲಿ ಸೋಂಕು ನಿಯಂತ್ರಣಕ್ಕೆ ಬೆಂಬಲ ನೀಡಿದ ಜನರನ್ನು ಅಭಿನಂದಿಸಲು ಬೂತ್ ಮಟ್ಟದಲ್ಲಿ ಧನ್ಯವಾದ ಅಭಿಯಾನ ನಡೆಸಿ, ಧನ್ಯವಾದ ಪತ್ರ ನೀಡಬೇಕು. ಇದರಿಂದ ಕೋರೋನಾ ವಿರುದ್ಧ ಹೋರಾಟಕ್ಕೆ ಮನೋಬಲ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಮೋದಿ ಪ್ರತಿಪಾದಿಸಿದರು. ಕೋರಾನಾ ವಿರುದ್ಧ ಹೋರಾಟ ಮಾಡುತ್ತಿರುವ, ಅಗತ್ಯ ಸೇವೆಯಲ್ಲಿ ತೊಡಗಿರುವವರನ್ನು ಅಭಿನಂದಿಸಬೇಕು. ಯುದ್ಧದ ಸಮಯದಲ್ಲಿ ಹಣ, ವಡವೆಗಳನ್ನು ನೀಡಿ ದಾನ ಪರಂಪರೆಗೆ ಹೆಸರಾಗಿದ್ದ ಜನ ಇದೀಗ ಕೋರೋನಾ ವಿರುದ್ಧದ ಹೋರಾಟಕ್ಕಾಗಿ ಪಿ.ಎಂ ಕಾರ್ಸ್ ನಿಧಿಗೆ ಉದಾರವಾಗಿ ನೆರವು ನೀಡಬೇಕು. ಈ ಎಲ್ಲಾ ಚಟುವಟಿಕೆಗಳಲ್ಲಿ ಪಕ್ಷದ ಕಾರ್ಯಕರ್ತರು ತೊಡಗಬೇಕು.. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಬೇಕು. ಪಕ್ಷದ ಕಾರ್ಯಕರ್ತರು ಸ್ವಯಂ ಸುರಕ್ಷಿತರಾಗಿರಬೇಕು. ಜನರನ್ನೂ ರಕ್ಷಿಸಬೇಕು ಎಂದು ಕರೆ ನೀಡಿದರು.
ಭಾರತವಷ್ಟೇ ಅಲ್ಲದೇ ಇಡೀ ಜಗತ್ತು ಸಂಕಷ್ಟದಲ್ಲಿದೆ. ನಮ್ಮ ಸಮರ್ಪಣೆ, ಬದ್ಥತೆಯಿಂದ ಸಶಕ್ತರಾಗಿ ಪ್ರಶಸ್ತರಾಗಲು ಇದು ಸಕಾಲ. ತ್ಯಾಗ, ಬಲಿದಾನಕ್ಕೆ ಹೆಸರಾದ ಈ ಪಕ್ಷ, ಸಂಘಟನೆ, ಸಮರ್ಪಣೆ, ಸಂಸ್ಕಾರಕ್ಕೂ ಸಹ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಒಂದಾದ ಮೇಲೆ ಒಂದರಂತೆ ನಿರ್ಣಯಗಳನ್ನು ಕೈಗೊಂಡಿದೆ. ವಿದೇಶದಲ್ಲಿರುವ ಭಾರತೀಯರನ್ನು ಕರೆತರುವ, ವೈದ್ಯಕೀಯ ಸಾಮರ್ಥ್ಯ ಹೆಚ್ಚಿಸುವ, ರಾಜ್ಯ ಸರ್ಕಾರಗಳ ಸಹಯೋಗದೊಂದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ನಮ್ಮ ಕಾರ್ಯವೈಖರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಸಹ ಶ್ಲಾಘಿಸಿದೆ ಎಂದು ಹೇಳಿದರು.ಲಾಕ್ ಡೌನ್ ರಾಷ್ಟ್ರ ರಕ್ಷಿಸುವ ಕೆಲಸವಾಗಿದ್ದು, ಇಡೀ ದೇಶದ ಜನರು ಪ್ರಬುದ್ಧತೆಯಿಂದ ವರ್ತಿಸಿದ್ದಾರೆ. ಭಾನುವಾರ ರಾತ್ರಿ 130 ಕೋಟಿ ಜನತೆಯ ವಿರಾಟ ದರ್ಶನ ಮಾಡಿದ್ದೇನೆ. ಬಡವರು, ಬಲ್ಲಿದರು, ನಗರ ಗ್ರಾಮೀಣ ಪ್ರದೇಶ ಎನ್ನದೇ ಇಲ್ಲಾ ಜನತೆಯಿಂದ ದೀಪ ಬೆಳಗುವ ಕಾರ್ಯಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು.