ಬೆಂಗಳೂರು, ಮೇ 6,ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಎಲ್ಲ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.ಹೊಸದಾಗಿ ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬ ಸಿಬ್ಬಂದಿಯನ್ನು ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಅವರ ಮೂಲಕ ತಪಾಸಣೆಗೆ ಒಳಪಡಿಸಿ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದ ನಂತರವೇ ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ. ಘಟಕ, ಕಾರ್ಯ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಪ್ರತಿ ದಿನ ಪ್ರತಿಯೊಬ್ಬ ನೌಕರರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಸದೃಢ ಎಂದು ಕಂಡು ಬಂದಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಲು ಅನುಮತಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಾರಿಗೆ ಬಸ್‌ಗಳ ಸಂಚಾರ ಆರಂಭಗೊಳ್ಳದಿದ್ದರೂ ಸಚಿವಾಲಯದ ನೌಕರರು ಮತ್ತು ಸಿಬ್ಬಂದಿಯನ್ನು ಕರೆತರಲು ನಿರ್ದಿಷ್ಟ ಮಾರ್ಗಸೂಚಿಗಳಲ್ಲಿ ಬಸ್ ಸಂಚರಿಸುತ್ತಿದೆ. ಮಾತ್ರವಲ್ಲ ಅಗತ್ಯ ಸೇವೆಗಳ ಸಿಬ್ಬಂದಿಗಾಗಿಯೂ ಬಸ್‌ಗಳನ್ನು ನೀಡಲಾಗುತ್ತಿದೆ. ಅಲ್ಲದೆ ಖಾಸಗಿ ಕಂಪನಿಗಳು ಒಪ್ಪಂದದ ಮೇರೆಗೆ ಕೆಲವು ಮಾರ್ಗಗಳಲ್ಲಿ ಬಸ್ ಸೇವೆಯನ್ನು ಬಾಡಿಗೆಗೆ ಪಡೆದಿವೆ. ಈ ಎಲ್ಲಾಕರ್ತವ್ಯಗಳಿಗೆ ಹಾಜರಾಗುವವರಿಗೆ ವೈದ್ಯಕೀಯ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ.