ಜಿಂದಾಲ್ಗೆ ಜಮೀನು ನೀಡಿಕೆಗೆ ವಿರೋಧ: ಬಳ್ಳಾರಿ ಪಾದಯಾತ್ರೆಗೆ ಬಿಜೆಪಿ ಚಿಂತನೆ

ಬೆಂಗಳೂರು, ಜೂ 18:  ಜಿಂದಾಲ್ ಸ್ಟೀಲ್ ಕಂಪನಿಗೆ 3,667 ಎಕರೆ ಸರ್ಕಾರಿ  ಜಮೀನು ಮಾರಾಟ ಮಾಡುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಈ ಸಂಬಂಧ ಹೋರಾಟ ತೀವ್ರಗೊಳಿಸಲು ಚಿಂತನೆ ನಡೆಸಿದೆ.  ಕಂಪನಿಗೆ ಜಮೀನನ್ನು ಕ್ರಯಕ್ಕೆ ನೀಡುವ ಬದಲು ಗುತ್ತಿಗೆ ನವೀಕರಣಕ್ಕೆ ಒತ್ತಾಯಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂರು ದಿನಗಳ ಕಾಲ ನಗರದ ಆನಂದ್ ರಾವ್ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿಗೆ ರಾಜ್ಯದ ಜನ ಹಾಗೂ ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಜಿಂದಾಲ್ ವಿರೋಧಿ ಹೇಳಿಕೆಯಿಂದ ಮತ್ತಷ್ಟು ಉತ್ತೇಜಿತರಾಗಿದ್ದಾರೆ. ಜಿಂದಾಲ್ಗೆ ಭೂಮಿ ನೀಡುವುದರ ವಿರುದ್ಧ ಜನಾಭಿಪ್ರಾಯವಿದೆ ಎಂಬುದನ್ನು ಮನಗಂಡಿರುವ ಬಿಜೆಪಿ ಇದೇ ವಿಷಯವನ್ನು ಜೀವಂತವಾಗಿಟ್ಟು ಹೋರಾಟ ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದೆ. ಹೀಗಾಗಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡುವ ಮೂಲಕ ಮೈತ್ರಿ ಸರ್ಕಾರದ  ವಿರುದ್ಧ  ಹೋರಾಟ ತೀವ್ರಗೊಳಿಸುವ ಸ್ಪಷ್ಟ ಸಂದೇಶ ರವಾನಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಪ್ರಕರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡುವ ಮೂಲಕ ಬಿಜೆಪಿ ವಿರುದ್ಧ ಜನಾಂದೋಲನ ರೂಪಿಸುವ ಮೂಲಕ 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಬಿಜೆಪಿ ಜಿಂದಾಲ್ ಸ್ಟೀಲ್ ಗೆ ಜಮೀನು ಪರಭಾರೆಯನ್ನು ಅಸ್ತ್ರವಾಗಿ ಮುಂದಿಟ್ಟುಕೊಂಡು ಹೋರಾಟ ನಡೆಸುವ ಮೂಲಕ ಬಿಜೆಪಿಗೆ ಮತ್ತಷ್ಟು ವರ್ಚಸ್ಸು ಹಾಗೂ ವಿಧಾನ ಸಭೆ ಚುನಾವಣೆ ಎದುರಾದರೆ ಅದರ ಲಾಭವನ್ನು ಪಡೆಯುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣಗಳು ಬಹುತೇಕ ಆರೋಪಗಳು ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ಮಾಡಿದ ಆರೋಪಗಳು ಸುಳ್ಳೆಂದು ಬಿಂಬಿಸಲು ಹಾಗೂ ಮೈತ್ರಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಲು ಹೋರಾಟ ಸಹಕಾರಿಯಾಗಲಿದೆ ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕರು ಬರಲು ಕಾರಣವಾಗಿದೆ ಎನ್ನಲಾಗಿದೆ. ಜಿಂದಾಲ್ ಪ್ರಕರಣವನ್ನು ರಾಜ್ಯ ಸಕರ್ಾರ ಸಚಿವ ಸಂಪುಟ ಉಪ ಸಮಿತಿಗೆ ವಹಿಸಿದೆ. ಸಂಪುಟ ಉಪ ಸಮಿತಿ ಸಾಧಕ-ಭಾದಕಗಳನ್ನು ಚರ್ಚಿಸಿ ಅಂತಿಮವಾಗಿ ಜಿಂದಾಲ್ ಗೆ ಭೂಮಿ ಪರಭಾರೆಗೆ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೋರಾಟ ರೂಪಿಸಿ ಸಕರ್ಾರದ ಗುತ್ತಿಗೆ ಮುಂದುವರೆಸುವಂತೆ ಒತ್ತಡ ಹೇರುವ ತಂತ್ರವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ.