ಸಿಎಎಗೆ ವಿರೋಧ: ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಬಹಿಷ್ಕರಿಸಿದ ಡಿಎಂಕೆ

ಚೆನ್ನೈ, ಜ.6 ,ತಮಿಳುನಾಡು ವಿಧಾನಸಭೆಯಲ್ಲಿ ಹೊಸ ವರ್ಷದ ಅಂಗವಾಗಿ ಸೋಮವಾರ ಕರೆದಿದ್ದ ವಿಶೇಷ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರ ಭಾಷಣದ ವೇಳೆ ಪ್ರಮುಖ ಪ್ರತಿಪಕ್ಷ ಡಿಎಂಕೆ ಸಿಎಎ ಸೇರಿದಂತೆ ರಾಜ್ಯದ ಕೆಲವು ಸಮಸ್ಯೆಗಳನ್ನು ಪ್ರಸ್ತಾಪಿಸಿ ಕಲಾಪ ಬಹಿಷ್ಕರಿಸಿತು.ಇಂದು ಬೆಳಗ್ಗೆ 10 ಗಂಟೆಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ರಾಜ್ಯಪಾಲರು ಭಾಷಣ ಆರಂಭಿಸಿದರು. ಈ ವೇಳೆ ಡಿಎಂಕೆ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಮತ್ತು ಅವರ ಪಕ್ಷದ ಇತರ ಸದಸ್ಯರು, ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು. ಆದರೆ ಸ್ಟಾಲಿನ್ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ರಾಜ್ಯಪಾಲರು ಸ್ಟಾಲಿನ್ ಅವರನ್ನು ಸಮಾಧಾನಪಡಿಸಲು ವ್ಯರ್ಥ ಪ್ರಯತ್ನ ನಡೆಸಿದರು. ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿದ ಡಿಎಂಕೆ ಸದಸ್ಯರು ಸ್ಟಾಲಿನ್ ಅವರ ನೇತೃತ್ವದಲ್ಲಿ ಸದನ ಬಹಿಷ್ಕರಿಸಿದರು. ಡಿಎಂಕೆ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಐಯುಎಂಎಲ್ ಸದಸ್ಯರು ಕೂಡ ಅವರನ್ನು ಹಿಂಬಾಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್‌, ರಾಜ್ಯದ ಸಾಲ ಮಿತಿ ಮೀರಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗುತ್ತಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಈ ವಿಷಯವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಮುಚ್ಚಿಟ್ಟಿದ್ದಾರೆ. ಆದ್ದರಿಂದ ರಾಜ್ಯಪಾಲರ ಭಾಷಣವನ್ನು ನಾವು ಬಹಿಷ್ಕರಿಸಿದ್ದೇವೆ ಎಂದು ಹೇಳಿದರು.ದೇಶದ ಜಾತ್ಯತೀತ ತತ್ವಕ್ಕೆ ಅಪಾಯವನ್ನುಂಟುಮಾಡುವ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಆಡಳಿತಾರೂಢ ಎಐಎಡಿಎಂಕೆ ಸಂಸತ್‌ನಲ್ಲಿ ಮತ ಚಲಾಯಿಸುವ ಮೂಲಕ ರಾಜ್ಯದಲ್ಲಿ ವಾಸಿಸುತ್ತಿರುವ ಶ್ರೀಲಂಕಾದ ತಮಿಳು ನಿರಾಶ್ರಿತರು ಮತ್ತು ಅಲ್ಪಸಂಖ್ಯಾತರಿಗೆ ದ್ರೋಹಬಗೆದಿದೆ ಎಂದು ಸ್ಟಾಲಿನ್ ಟೀಕಿಸಿದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಏಳು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವ ಕುರಿತು ರಾಜ್ಯ ಸಚಿವ ಸಂಪುಟದ ಶಿಫಾರಸು ಮಾಡಿದ್ದರೂ ರಾಜ್ಯಪಾಲರು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿದ ಅವರು, ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ), ಪೊಲೀಸ್ ಮತ್ತು ಸರ್ಕಾರಿ ಯಂತ್ರೋಪಕರಣಗಳು ಜಂಟಿಯಾಗಿ ಆಡಳಿತ ಪಕ್ಷಕ್ಕೆ ಸಹಾಯ ಮಾಡುತ್ತಿವೆ ಎಂದು ಆರೋಪಿಸಿದರು.ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಹೇಗೆ ವಿಜಯಶಾಲಿಯಾಗಿದ್ದಾರೆ ಎಂಬ ಬಗ್ಗೆ ಸಮಾರಂಭವೊಂದರಲ್ಲಿ ಸಚಿವರು ಸರ್ಕಾರಿ ಅಧಿಕಾರಿಯನ್ನು ನಿಂದಿಸಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

ನೀಟ್ ವಿಷಯದಲ್ಲಿ, ರಾಜ್ಯ ವಿಧಾನಸಭೆಯಲ್ಲಿ ಎರಡು ನಿರ್ಣಯಗಳನ್ನು ಅಂಗೀಕರಿಸಿದರೂ ರಾಷ್ಟ್ರಪತಿಗಳ ಅನುಮತಿ ಪಡೆಯುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸುವ ಮೂಲಕ ನಾಟಕವಾಡುತ್ತಿದೆ ಎಂದು ದೂರಿದರು.ಸ್ಥಳೀಯ ಸಂಸ್ಥೆಗಳ ಸಮೀಕ್ಷೆಯ ಫಲಿತಾಂಶಗಳನ್ನು ಉಲ್ಲೇಖಿಸಿ, ಡಿಎಂಕೆ ಪ್ರಗತಿ ವಿರೋಧಿ ಮತ್ತು ಎಐಎಡಿಎಂಕೆ ಪ್ರಗತಿಪರವಾಗಿದೆ ಎಂದು ಸಚಿವ ಡಿ ಜಯಕುಮಾರ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ  ಸ್ಟಾಲಿನ್, ಸಂಸತ್ತು, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ  ಡಿಎಂಕೆ ಬಲ ಹೆಚ್ಚಿದೆ. ಈ ಹೆಚ್ಚಳ ಸಚಿವರ ಹೇಳಿಕೆ ತಪ್ಪು ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.