ನವದೆಹಲಿ, ಫೆ.29 : ದೆಹಲಿಯಲ್ಲಿ ತಕ್ಷಣವೇ ಶಾಂತಿ ಸ್ಥಾಪನೆ ಮತ್ತು ರಾಷ್ಟ್ರಪತಿಗಳಿಗೆ ನೇರವಾಗಿ ಉತ್ತರದಾಯಿಯಾಗಿರುವ ಉಪರಾಜ್ಯಪಾಲ ಮತ್ತಿತರ ಅಧಿಕಾರಿಗಳಿಗೆ ತ್ವರಿತವಾಗಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಂತೆ ನಿರ್ದೇಶನ ನೀಡಬೇಕು. ಉದ್ರೇಕಕಾರಿ ದ್ವೇಷ ಭಾಷಣಗಳನ್ನು ಮಾಡಿದ ಎಲ್ಲರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ಮತ್ತು ಹಿಂಸಾಚಾರ ನಡೆಸಿದವರನ್ನು ಶಿಕ್ಷಿಸುವಂತೆ ಖಾತರಿಪಡಿಸಬೇಕು ಎಂದು ದೇಶದ ಏಳು ಪ್ರಮುಖ ವಿರೋಧ ಪಕ್ಷಗಳು ರಾಷ್ಟ್ರಪತಿಗೆ ಮನವಿ ಮಾಡಿವೆ.
ದೇಶದ ರಾಜಧಾನಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯ ಬಗ್ಗೆ ರಾಷ್ಟ್ರಪತಿಯವರನ್ನು ಭೇಟಿಯಾಗಿ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಮಾಡಿಕೊಡಬೇಕು ಎಂದು ಹಲವು ಪ್ರತಿಪಕ್ಷಗಳ ಪರವಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಫೆಬ್ರುವರಿ 26ರಂದು ಪತ್ರ ಬರೆದಿದ್ದರು. ಫೆಬ್ರುವರಿ 28ರಿಂದ ಮಾರ್ಚ್ 2 ರವರೆಗೆ ರಾಷ್ಟ್ರಪತಿಗಳನ್ನು ಭೇಟಿಯಾಗಲು ಆಗುವುದಿಲ್ಲ ಎಂಬ ಮಾಹಿತಿ ಅಲ್ಲಿಂದ ಬಂದ ನಂತರ ಏಳು ಪಕ್ಷಗಳ ಮುಖಂಡರು ಫೆಬ್ರುವರಿ 28ರ ಸಂಜೆ ರಾಷ್ಟ್ರಪತಿಗಳಿಗೆ ಒಂದು ಜಂಟಿ ಮನವಿಪತ್ರ ಸಲ್ಲಿಸಿ, ರಾಷ್ಟ್ರಪತಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಮಾನವೀಯತೆಯ ಆಧಾರದಲ್ಲಿ, ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿಯಾತ್ರೆ ಕೈಗೊಳ್ಳಲು ಹಾಗೂ ಶಾಂತಿ ಸಮಿತಿಗಳನ್ನು ರಚಿಸಲು ತಮಗೆ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಸಬೇಕು ಎಂದು ಕೋರಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಡಿಎಂಕೆಯ ಸಂಸದೀಯ ಪಕ್ಷದ ಮುಖಂಡರಾದ ಟಿ.ಆರ್.ಬಾಲು, ಎನ್ಸಿಪಿಯ ಸಂಸತ್ ಸದಸ್ಯ ಪ್ರಫುಲ್ ಪಟೇಲ್, ಲೋಕತಾಂತ್ರಿಕ್ ಜನತಾದಳದ ಅಧ್ಯಕ್ಷ ಶರದ್ ಯಾದವ್, ಆಮ್ ಆದ್ಮಿ ಪಾರ್ಟಿಯ ಸಂಸತ್ ಸದಸ್ಯ ಸಂಜಯ್ ಸಿಂಗ್ ಮತ್ತು ಆರ್ಜೆಡಿಯ ಸಂಸತ್ ಸದಸ್ಯ ಪ್ರೊ. ಮನೋಜ್ ಕುಮಾರ್ ಝಾ ಈ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ರಾಷ್ಟ್ರೀಯ ರಾಜಧಾನಿ ದೆಹಲಿಯನ್ನು ಮೂರು ದಿನಗಳ ಕಾಲ ತಲ್ಲಣಗೊಳಿಸಿರುವ ಗಲಭೆಗಳ ಬಗ್ಗೆ ಮನವಿ ಪತ್ರದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಇದುವರೆಗೆ 42 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮನೆಮಾರುಗಳು, ಆಸ್ತಿಗಳನ್ನು ಸುಟ್ಟುಹಾಕಿದ್ದು, ಇದರಿಂದಾಗಿ ಸಾವಿರಾರು ಮಂದಿ ಗುಳೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದು ಸಶಸ್ತ್ರ, ನಿಯಮಹೀನ ಗೂಂಡಾ ಪಡೆಗಳು ಸೃಷ್ಟಿಸಿರುವ ಒಂದು ಬೃಹತ್ ಪ್ರಮಾಣದ ಮಾನವ ವೇದನೆ. ಈ ಗೂಂಡಾ ಪಡೆಗಳು ಮುಕ್ತವಾಗಿ, ಯಾವುದೇ ಅಡೆತಡೆಯಿಲ್ಲದೆ ಅಡ್ಡಾಡಲು ಭದ್ರತಾ ಪಡೆಗಳು ಬಿಟ್ಟಿವೆ ಎಂಬ ಸಂಗತಿಯನ್ನು ಈ ಮನವಿ ಪತ್ರ ರಾಷ್ಟ್ರಪತಿಗಳ ಗಮನಕ್ಕೆ ತರಲಾಗಿದೆ. ಇದು ಅತ್ಯಂತ ಖಂಡನೀಯ, ಭಾರತೀಯ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರದಲ್ಲಿ ಇದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ ಎಂದು ಮನವಿ ಪತ್ರ ತಿಳಿಸಲಾಗಿದೆ.
ಮನೆಮಾರು ಕಳಕೊಂಡವರಿಗೆ ಪರಿಹಾರ ಶಿಬಿರಗಳನ್ನು ತೆರೆಯಬೇಕು, ಅವರ ಮೇಲೆ ಇನ್ನಷ್ಟು ಹಲ್ಲೆಗಳು ನಡೆಯದಂತೆ ಭದ್ರತೆ ಹಾಗೂ ಅಗತ್ಯ ಸರಕುಗಳ ಸಾಕಷ್ಟು ಪೂರೈಕೆ ಮಾಡಬೇಕು. ಮೃತರ ಕುಟುಂಬಗಳಿಗೆ ಮತ್ತು ಈ ಹಲ್ಲೆಗಳಲ್ಲಿ ಗಾಯಗೊಂಡವರಿಗೆ ಸೂಕ್ತ ಪರಿಹಾರಗಳನ್ನು ಪ್ರಕಟಿಸಬೇಕು. ಮನೆ, ಆಸ್ತಿ, ವ್ಯಾಪಾರದ ಸ್ಥಳಗಳು ಧ್ವಂಸಗೊಂಡಿರುವುದರಿಂದ ಆಗಿರುವ ನಷ್ಟಗಳಿಗೆ ಸಾಕಷ್ಟು ಪರಿಹಾರ ನೀಡಬೇಕು. ಗಲಭೆಪೀಡಿತ ಪ್ರದೇಶಗಳಲ್ಲಿ ಬಹುಧರ್ಮೀಯ ಮತ್ತು ಅಂತರಧರ್ಮೀಯ ಶಾಂತಿಯನ್ನು ಮತ್ತು ಜನಗಳ ನಡುವೆ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಬಲಪಡಿಸಲು ಶಾಂತಿಯಾತ್ರೆಗಳನ್ನು ಸಂಘಟಿಸ ಬಯಸುವ ನಮ್ಮಲ್ಲಿನ ಕೆಲವರಿಗೆ ಅನುಮತಿ ನೀಡಬೇಕು. ಈ ಗಲಭೆಗಳು ಜನರ ನಡುವೆ, ಅದರಲ್ಲೂ ಮಕ್ಕಳ ನಡುವೆ ಕಲ್ಪಿಸಲೂ ಆಗದ ಮಾನಸಿಕ ವೇದನೆಯನ್ನು ಉಂಟು ಮಾಡಿರುವುದರಿಂದ, ಪೀಡಿತ ಪ್ರದೇಶಗಳಲ್ಲಿ ಇವನ್ನು ನಿರ್ವಹಿಸಲು ಟ್ರೌಮಾ(ಭಾವಾಘಾತ) ಕೇಂದ್ರಗಳನ್ನು ತೆರೆಯಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.