ನವದೆಹಲಿ,ಫೆ೧೦ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮೀಸಲಾತಿ ವ್ಯವಸ್ಥೆಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.ದಲಿತರ ಪ್ರಗತಿ, ಶ್ರೇಯೋಭಿವೃದ್ದಿಯನ್ನು ಬಿಜೆಪಿ, ಆರ್ ಎಸ್ ಎಸ್ ಎಂದೂ ಬಯಸುವುದಿಲ್ಲ, ವ್ಯವಸ್ಥೆಯನ್ನು ಹಾಳುಗೆಡವಲು ಇವು ಸದಾ ಆಲೋಚಿಸುತ್ತಿವೆ ಎಂದು ಹೇಳಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಮೀಸಲಾತಿ ರದ್ದುಪಡಿಸಬೇಕು ಎಂಬುದು ಆರ್‌ಎಸ್‌ಎಸ್, ಬಿಜೆಪಿಯ ಮೂಲದಲ್ಲಿಯೇ ಅಡಕವಾಗಿದೆ ಎಂದು ಹೇಳಿರುವ ಅವರು, ಎಂತಹ ಪರಿಸ್ಥಿತಿಯಲ್ಲೂ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳಿಗೆ ಮೀಸಲಾತಿ ಮುಂದುವರಿಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ.ದಲಿತರು, ಹಿಂದುಳಿದವರಿಗೆ ಒದಗಿಸಿರುವ ಮೀಸಲಾತಿ ಸೌಲಭ್ಯ ರದ್ದುಪಡಿಸಬೇಕು ಎಂಬುದು ಪ್ರಧಾನಿ ಮೋದಿ ಮತ್ತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕನಸಾಗಿದ್ದು, ಆದರೆ ನಾವು ಅವರ ಕನಸು ಯಾವುದೇ ಕಾರಣಕ್ಕೂ ನನಸಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿಹಿಡಿದಿದೆ. ಈ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.