ಗ್ರಾಮ ಸಭೆಗಳಲ್ಲಿನ ಅಭಿಪ್ರಾಯಗಳು ಯೋಜನೆ ರೂಪದಲ್ಲಿ ಜಾರಿಗೆ ಬರಬೇಕು: ಸಚಿವ ಎಚ್‌.ಕೆ.ಪಾಟೀಲ

ಗ್ರಾಮ ಸಭೆಗಳಲ್ಲಿನ ಅಭಿಪ್ರಾಯಗಳು ಯೋಜನೆ ರೂಪದಲ್ಲಿ ಜಾರಿಗೆ ಬರಬೇಕು: ಸಚಿವ ಎಚ್‌.ಕೆ.ಪಾಟೀಲ Opinions in village councils should be implemented in the form of plans: Minister H.K. Patil

ಲೋಕದರ್ಶನ ವರದಿ 

ಗದಗ  17: ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿನ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯವನ್ನು ಗ್ರಾಮ ಸಭೆಗಳ ಮೂಲಕ ಮೇಲಿನ ಹಂತಕ್ಕೆ ಕೊಂಡೊಯ್ಯಬೇಕು. ಗ್ರಾಮ ಸಭೆಗಳಲ್ಲಿನ ಅಭಿಪ್ರಾಯಗಳನ್ನು ಯೋಜನೆ ರೂಪದಲ್ಲಿ ಜಾರಿಗೆ ತರುವ ಕಾರ್ಯವಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌.ಕೆ.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ(ಫೆ.17) ಜರುಗಿದ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜನಪ್ರತಿನಿಧಿಗಳು ಜನರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ ರಾಜ್ ಕಾನೂನು ಜಾರಿಗೆ ತರುವುದರಲ್ಲಿ ಗದಗ ಜಿಲ್ಲೆಯ ಪಾತ್ರ ಬಹುಮುಖ್ಯವಾಗಿದೆ. ಗ್ರಾಮ ಮಟ್ಟದಿಂದಲೇ ಯೋಜನೆಗಳನ್ನು ರೂಪಿಸುವ ಕಾನೂನಿನಲ್ಲಿವೆ. ಈ ಕಾನೂನ ಸಮರ​‍್ಕವಾಗಿ ಅನುಷ್ಠಾನವಾದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. 

ಕೆಳಹಂತದಿಂದ ಮೇಲಿನ ಹಂತದವರೆಗೆ ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರುವ ಕಾರ್ಯದಲ್ಲಿ ಜಿಲ್ಲೆ ಯಾವುದೇ ಕಾರಣಕ್ಕೂ ಹಿಂದುಳಿಯಬಾರದು. ಯೋಜನೆಗಳನ್ನು ರೂಪಿಸುವಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಡುವೆ ಸಂಘರ್ಷವಿದ್ದು, ದೇಶದಲ್ಲಿ ಜನರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ.  

ಅಧಿಕಾರಿಗಳು ಜನ ಮಿತ್ರರಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಗ್ರಾಮಸಭೆ, ಜನಪ್ರತಿನಿಧಿಗಳ ಸಲಹೆಗಳನ್ನು ಪಡೆಯಬೇಕಾಗಿದೆ. ಗ್ರಾಮ ಪಂಚಾಯತಗಳ ಮೂಲಕ ಆದ್ಯತೆ ಪ್ರಕಾರ ಯೋಜನೆಗಳ ಪಟ್ಟಿಯನ್ನು ತಯಾರಿಸಬೇಕು. ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಗ್ರಾಮಸಭೆ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವಂತಹ ಮಾದರಿ ಕಾರ್ಯವನ್ನು ಮಾಡಿದಲ್ಲಿ ಗ್ರಾಮಸಭೆಗೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ.  

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಶೇಂಗಾ, ಮಾವು ಸೇರಿದಂತೆ ಇತರೆ ಬೆಳಗಳ ಇಳುವರಿ ಕಡಿಮೆಯಾಗುತ್ತಿರುವ ಕುರಿತು ಕಾರಣ ತಿಳಿದುಕೊಂಡು ಮಾಹಿತಿ ನೀಡುವುದರ ಜೊತೆಗೆ ಜಿಲ್ಲೆಯ ಮೂಲಭೂತ ಅವಶ್ಯಕತೆಗಳು, ಶಾಲೆಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕುರಿತು ವಿವರವಾದ ಮಾಹಿತಿ ಕ್ರೋಡಿಕರಿಸಿ ಪ್ರಸ್ತಾವನೆಯನ್ನು ಸಲ್ಲಿಸಲು ಸಚಿವರಾದ ಎಚ್‌.ಕೆ.ಪಾಟೀಲ ಅವರು ಸೂಚಿಸಿದರು. 

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್‌.ಪಾಟೀಲ ಅವರು ಮಾತನಾಡಿ ಜನರ ಭಾವನೆಗಳು ಯೋಜನೆ ರೂಪದಲ್ಲಿ ಜಾರಿಯಾಗಬೇಕು. ಜನರ ಮಾತಿಗೆ ಗೌರವ ದೊರಕುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕಾರ್ಯ ನಿರ್ವಹಿಸಬೇಕು.  

ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯ ಪಡೆದು ಯೋಜನೆ ರೂಪಿಸುವ ಕಾನೂನು ಗದಗ ಜಿಲ್ಲೆಯಿಂದಲೇ ಪ್ರಾರಂಭಿಸಲಾಗಿದ್ದು ಈ ಕಾನೂನನ್ನು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕಾಗಿದೆ ಎಂದರು. 

ಗ್ರಾಮಸಭೆಗಳ ಮೂಲಕ ಆಯ್ಕೆ ಮಾಡುವಂತಹ ಯೋಜನೆಗಳನ್ನು ಆದ್ಯತೇ ಮೂಲಕ ಅನುಷ್ಠಾನಕ್ಕೆ ಕ್ರಮ ವಹಿಸಿ, ಆಯಾ ಯೋಜನೆಗಳನ್ನು ಗ್ರಾಮ ಪಂಚಾಯತ ಮೂಲಕವೇ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು. ಯೋಜನೆಗಳ ತಯಾರಿಕೆಯಲ್ಲಿ ಗ್ರಾಮೀಣ ವಾರ್ಡ ಸಭೆ, ಗ್ರಾಮ ಸಭೆ, ಗ್ರಾಮ ಅಭಿವೃದ್ಧಿ ಯೋಜನೆ ಮೂಲಕ ಕೆಳಮಟ್ಟದಿಂದಲೇ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. 

ಸಭೆಯಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳಾದ ಕೃಷ್ಣಾ ಪರಾಪೂರ, ಬರಕತ್ ಅಲಿಮುಲ್ಲಾ ಅಬ್ದುಲ್, ಚಂದ್ರಶೇಖರಗೌಡ ಕರಿಸೋಮನಗೌಡ, ವಿಜಯಕುಮಾರ ನೀಲಗುಂದ, ರಾಚಯ್ಯ ಮಾಲಗಿತ್ತಿ, ರಾಜೇಸಾಬ ಸಾಂಗ್ಲಿಕರ, ರಾಜಶೇಖರ ಮಾಲಗಿತ್ತಿ, ಸುರೇಶ ಕಟ್ಟಿಮನಿ, ರಾಜೇಸಾಬ ಬೆಟಗೇರಿ, ರಾಜೇಶ್ವರಿ ವೀರನಗೌಡ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಮಣದೀಪ ಚೌದರಿ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್,ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್‌.ಮುಂಡರಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.  ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ ಅವರು 2026-27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಯಾದಿಯನ್ನು ಮಂಡಿಸಿದರು.