ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅಭಿಮತ

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅಭಿಮತ Opinion of K.E. Chidanandappa, Chairman of the District Guarantee Schemes Implementation Authority

ಲೋಕದರ್ಶನ ವರದಿ  

       ಬಳ್ಳಾರಿ 13:  ಮಹಿಳೆಯರು ಕೂಡ ಪುರುಷರಷ್ಟೇ ಸಮಾನರು. ಮನೆಯ ಯಜಮಾನಿಕೆಯಿಂದ ಹಿಡಿದು ನಮ್ಮ ಭಾರತದಲ್ಲಿ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನಗಳಲ್ಲಿರುವ ಮಹಿಳೆಯರ ಪಾತ್ರ ಅತ್ಯುತ್ತಮವಾದದ್ದು ಎಂದು ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು. 

ಕುರುಗೋಡು ತಾಲ್ಲೂಕು ಪಂಚಾಯತ್ ವತಿಯಿಂದ ಕುರುಗೋಡು ಪಟ್ಟಣದ ರೈತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ  ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳೆಯರನ್ನು ಸ್ವಾವಲಂಬಿಗಳಾನ್ನಾಗಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಪ್ರತಿಮನೆಯ ಯಜಮಾನಿಯು ಸ್ವಾವಲಂಬಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು. 

ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಸವನ ಗೌಡ ಅವರು ಮಾತನಾಡಿ, ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬಂದು ಹಲವಾರು ರಂಗದಲ್ಲಿ ತಮ್ಮದೇ ಆದ  ಪ್ರತಿಭೆಯ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಕೂಡ ಪ್ರಬಲ ಪೈಪೋಟಿ ನೀಡುತ್ತಿರುವುದು ಸಂತೋಷದಾಯಕ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು. 

ಕುರುಗೋಡು ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ನಿರ್ಮಲಾ ಕೆ.ವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಸದೃಢರಾಗಬೇಕು. ಸಮಾಜದಲ್ಲಿ ತಮ್ಮದೇ ಛಾಪು ಮೂಡಿಸಬೇಕು ಎಂದು ಹೇಳಿದರು. ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸುವಲ್ಲಿ ಹಾಗೂ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಒತ್ತಿ ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಶಿವರಾಮ ರೆಡ್ಡಿ, ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕ ರೇಣುಕಚಾರ್ಯ ಸ್ವಾಮಿ ಸೇರಿದಂತೆ ತಾಲ್ಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಲಕ್ಷ್ಮಿ, ತಸ್ಲೀಮಾ ಬಾನು, ರಮಾಲಿ, ತಿಮ್ಮಪ್ಪ , ದೇವರಾಜ್, ಪ್ರಭಾಕರ್ ರೆಡ್ಡಿ ಮತ್ತು ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಸದಸ್ಯರು, ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳು, ವಿವಿಧ ಸ್ವಸಹಾಯ ಸಂಘದ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ತಾಪಂ ಅಧಿಕಾರಿ-ಸಿಬ್ಬಂದಿ ವರ್ಗ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.