ಕೋವಿಡ್ ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಕಾರವಾರ: ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಯ (ಕ್ರಿಮ್ಸ್) ಕೋವಿಡ್ ವಾರ್ಡ್ ಗೆ ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದ ದಾಂಡೇಲಿಯ ಕೋವಿಡ್ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ತಾಯಿ ,ಮಗು ಇಬ್ಬರೂ ಆರೋಗ್ಯ ವಾಗಿದ್ದಾರೆಂದು ಕ್ರಿಮ್ಸ ನಿರ್ದೇಶಕರು ತಿಳಿಸಿದ್ದಾರೆ.
ಮಹಿಳೆಗೆ ಮೊದಲ ಹೆರಿಗೆ ಸಹ ಸಿಜೆರಿಯನ್ ಮಾಡಿಸಿಕೊಂಡಿದ್ದ ಕಾರಣ, ಎರಡನೇ ಹೆರಿಗೆ ಸಮಯಕ್ಕೆ ಈಕೆಯ ಗರ್ಭಕೋಶವು ಒಡೆದಿತ್ತು ಎಂದು ವೈದ್ಯರು ತಿಳಿಸಿದ್ದಾರೆ, ಜೊತೆಗೆ ಹೊಕ್ಕುಳ ಬಳ್ಳಿ ಮಗುವಿನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಇದರಿಂದಾಗಿ ತಾಯಿ ಹಾಗೂ ಮಗು ಇಬ್ಬರೂ ಅಪಾಯದಲ್ಲಿದ್ದರು. ತಕ್ಷಣ ಎಚ್ಚೆತ್ತ ಆಸ್ಪತ್ರೆಯ ವೈದ್ಯರು ಸಿಜೆರಿಯನ್ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಹಾಗೂ ಮಗು ಇಬ್ಬರೂ ಅಪಾಯದಿಂದ ಪಾರಾಗಿದ್ದು, ಆರೋಗ್ಯಯುತವಾಗಿದ್ದಾರೆ ಎಂದು ಕ್ರಿಮ್ಸ್ ವೈದ್ಯರು ಹೇಳಿದ್ದಾರೆ.
ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ವೈದ್ಯರುಗಳಾದ ಡಾ.ಶಿವಾನಂದ , ಡಾ.ಪೂಜಾ, ಅರವಳಿಕೆ ತಜ್ಞರಾದ ಡಾ.ಎಸ್.ಬಿ.ಕಡೂರ, ಚಿಕ್ಕ ಮಕ್ಕಳ ತಜ್ಞರಾದ ಡಾ.ವಿಶ್ವನಾಥ, ಹಾಗೂ ಶುಷ್ರೂಶಕಿಯರಾದ ಶ್ರೀಶಾ, ಬಿ.ಎಸ್.ಗೌರಿ ಹಾಗೂ ಓಟಿ ಸಹಾಯಕರಾದ ಪ್ರವೀಣ್ ಅವರನ್ನೊಳಗೊಂಡ ತಂಡವು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ನಡೆಸಿದೆ. ಇವರಿಗೆ ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅಭಿನಂದಿಸಿದ್ದಾರೆ.ಕೋವಿಡ್ ಸೋಂಕಿತ ಗರ್ಭೀಣಿಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.