ಕಲಾವಿದರ ರಕ್ಷಣೆಗೆ ಯೋಜನೆ : ಫೆಸ್ ಬುಕ್ ಲೈವ್ ನೃತ್ಯೋತ್ಸವ
ಕಾರವಾರ, ಆಗಸ್ಟ್ 8: ಕೋವಿಡ್ -19 ಮಹಾಮಾರಿ ಕಾಯಿಲೆಯನ್ನು ತಡೆಗಟ್ಟುವ ಸಲುವಾಗಿ ಮನೆಯಲ್ಲಿರುವ ಪ್ರತಿಭಾವಂತ ಕಲಾವಿದರಿಗೆ ರಾಜ್ಯ ಮಟ್ಟದ ಕಲಾ ಪ್ರದರ್ಶ ಆಯೋಜಿಸಲಾಗಿದೆ. ರಾಜ್ಯದ ವಿವಿಧ ರಂಗದ ಕಲಾವಿದರನ್ನು ಗೌರವಿಸಿ, ಪುರಸ್ಕಾರ ನೀಡುವ ಹೊಸ ಯೋಜನೆಯೊಂದು ರೂಪಿಸಿದ್ದು, ಈ ರಾಜ್ಯ ಮಟ್ಟದ 'ನೃತ್ಯೋತ್ಸವ' ಕಾರ್ಯಕ್ರಮವನ್ನು ಫೇಸ್ ಬುಕ್ ಲೈವ್ ಮೂಲಕ ಮತ್ತು ನೇರವಾಗಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಅಂಕೋಲಾದ ಸಂಗಾತಿ ರಂಗಭೂಮಿಯ ಕಾರ್ಯಾಧ್ಯಕ್ಷ ಕೆ.ರಮೇಶ್ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 1,000 ಸಂಚಿಕೆ ನಡೆಸುವ ಮೂಲಕ ಈ ವಿನೂತನ ಪ್ರಯೋಗವನ್ನು ಆರಂಭಿಸಿದ್ದೇವೆ. ಆಗಸ್ಟ್ 9 'ಕ್ರಾಂತಿ ದಿನ'ದಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಒಟ್ಟು 10 ಸಾವಿರ ಸಂಚಿಕೆಗಳಲ್ಲಿ ಮೂಡಿಬರಲಿರುವ ವಿವಿಧ ರಂಗ ಕಲಾ ಪ್ರಕಾರಗಳಲ್ಲಿ ಕಾರ್ಯಕ್ರಮ ಜೋಡಿಸಲಾಗಿದೆ. ರಾಜ್ಯ ವ್ಯಾಪ್ತಿಯಲ್ಲಿ ಬರುವ ರಂಗ ಕಲಾವಿದರನ್ನು ಗುರುತಿಸಿ, ಕಲಾ ಪುರಸ್ಕಾರ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ನೃತ್ಯ ಕ್ಷೇತ್ರಕ್ಕೆ ಮಾತ್ರವಲ್ಲದೆ ಬೇರೆ ಬೇರೆ ರಂಗಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಸಹ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು. ಈಗ ಪ್ರಾರಂಭದ ಹಂತದಲ್ಲಿ ನೃತ್ಯ ಕ್ಷೇತ್ರಕ್ಕೆ ಸಂಬಂಧಿಸಿ ಆಧುನಿಕ ಶೈಲಿಯ ನೃತ್ಯ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸುವ ಎಲ್ಲಾ ನೃತ್ಯ ಕಲಾವಿದರಿಗೂ ನಾಟ್ಯಮಯೂರಿ ಹಾಗೂ ಸ್ಟೇಟ್ ಡ್ಯಾನ್ಸ್ ಚಾಂಪಿಯನ್ ಅವಾರ್ಡ್ 2020- 21 ರಾಜ್ಯ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಅವರ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು. ಕೋವಿಡ್ ನಿಂದಾಗಿ ಅವಕಾಶ ವಂಚಿತರಾಗುತ್ತಿರುವ ನೃತ್ಯ ಹಾಗೂ ವಿವಿಧ ರಂಗ ಕಲಾವಿದರಿಗೆ, ವಿವಿಧ ಕಲಾ ಪ್ರಕಾರಗಳಲ್ಲಿಯೂ ಸಹ ಕಾರ್ಯಕ್ರಮ ನಡೆಯಲಿದೆ. ಪ್ರತಿ ಭಾನುವಾರ ಆನ್ ಲೈನ್ ಮೂಲಕ ನೃತ್ಯೋತ್ಸವ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ದೇಶದಾದ್ಯಂತ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆ ಈಗಾಗಲೇ ವ್ಯಕ್ತವಾಗಿದೆ. ಆದ್ದರಿಂದ ನಮ್ಮ ಜಿಲ್ಲೆ ಮತ್ತು ರಾಜ್ಯದ ಎಲ್ಲ ನೃತ್ಯಪಟುಗಳು ತಮ್ಮ ಅಗಾಧ ನೃತ್ಯ ಪ್ರತಿಭೆಯನ್ನು ವ್ಯಕ್ತಪಡಿಸಬಹುದಾಗಿದೆ. ಅದಕ್ಕೆ ತಕ್ಕ ಗೌರವ ನಮ್ಮಿಂದ ನಿಮಗೆ ಸಿಗಲಿದೆ ಎಂದು ತಿಳಿಸಿದರು.
ಈ ವರ್ಷದ ಆಗಸ್ಟ್ 9ರಿಂದ ಮುಂದಿನ ವರ್ಷ ಆಗಸ್ಟ್ 09ರವರೆಗೆ ಈ ನೃತ್ಯೋತ್ಸವ ನಡೆಯಲಿದ್ದು, ಕೊನೆಯ ಕಾರ್ಯಕ್ರದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರು ಭಾಗವಹಿಸಲಿದ್ದಾರೆ. ಈ ವಿನೂತನ ಕಾರ್ಯಕ್ರಮದ ಪ್ರಯೋಗ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಆಯೋಜಿಸುತ್ತಿದ್ದೇವೆ. ಆದ್ದರಿಂದ ಜಿಲ್ಲೆಯ ಎಲ್ಲಾ ವಿವಿಧ ಕಲಾ ಪ್ರಕಾರದ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆ ವ್ಯಕ್ತಪಡಿಸಿ, ಇಲ್ಲಿ ಗೌರವಗಳನ್ನು ಸಹ ನಮ್ಮಿಂದ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರನ ಮೊಬೈಲ್ ಸಂಖ್ಯೆ 90192 89883 / 96110 06994ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮ ವ್ಯವಸ್ಥಾಪಕ ಕೆ.ಎನ್.ಸಾಹಿತ್ಯ, ಡ್ಯಾನ್ಸ್ ಮಾಸ್ಟರ್ ಎಂ.ಬಿ.ರಾಜನ್, ಶೋಭಿತಾ ಹೆಗಡೆ ಇದ್ದರು