ಏಡಿಬಿ ರಸ್ತೆ ಏಕಮುಖ ಸಂಚಾರ : ವ್ಯಾಪಾರಸ್ಥರ ಆಕ್ರೋಶ- ರದ್ದುಪಡಿಸಲು ಆಗ್ರಹ

ಏಡಿಬಿ ರಸ್ತೆ ಏಕಮುಖ ಸಂಚಾರ : ವ್ಯಾಪಾರಸ್ಥರ ಆಕ್ರೋಶ- ರದ್ದುಪಡಿಸಲು ಆಗ್ರಹ One-way traffic on ADB Road: Traders express outrage, demand revocation

ರಾಣಬೆನ್ನೂರ 15: ನಗರದ ಎಡಿಬಿ ರಸ್ತೆಯ ಏಕಮುಖ ಸಂಚಾರಿ ವ್ಯವಸ್ಥೆಯನ್ನು  ಮರು ಪರೀಶೀಲಿಸಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಎಡಿಬಿ ರಸ್ತೆಯ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಬಂದ್ ಗೊಳಿಸಿ ಬುಧವಾರ ಪ್ರತಿಭಟನೆ ನಡೆಸಿದರು.  ಪ್ರತಿಭಟನೆ ನೇತ್ರತ್ವ ವಹಿಸಿದ್ದಜಗದೀಶ ಪ್ರಜಾಪತ್  ಮಾತನಾಡಿನಾವುಗಳು ಎಡಿಬಿರಸ್ತೆಯ ವ್ಯಾಪಾರಿಗಳಾಗಿದ್ದು, ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಈ ರಸ್ತೆಯಲ್ಲಿ ನೂರಾರು ಅಂಗಡಿಗಳಿದ್ದು,  ಕುಟುಂಬಗಳ ಜೀವನೋಪಾಯ ಇದನ್ನೆ ಅವಲಿಂಬಿಸಿದೆ ಎಂದರು. ಈಗಾಗಲೇ ಜಾರಿಗೊಳಿಸಿರುವ ಏಕಮುಖ ಸಂಚಾರಿ ವ್ಯವಸ್ಥೆಯಿಂದ ಎಲ್ಲ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆಯು  ಸಾಕಷ್ಟು ಇಳಿಮುಖ ಆಗಿರುವುದರಿಂದ ವ್ಯಾಪಾರ ವಹಿವಾಟು ಕುಂಠಿತವಾಗಿದೆ ಎಂದರು. ಇದರಿಂದಾಗಿ ಅಂಗಡಿ ಬಾಡಿಗೆ, ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಹಾಗೂ ಇತರೆ ದಿನನಿತ್ಯದ ವೆಚ್ಚಗಳನ್ನು ಭರಿಸುವುದು ಅತ್ಯಂತ ಕಷ್ಟಕರವಾಗಿದೆ. ವ್ಯಾಪಾರ ನಷ್ಟದಲ್ಲಿದ್ದು, ತಮ್ಮ ವ್ಯವಹಾರವನ್ನು ಮುನ್ನಡೆಸುವುದೇ ಸವಾಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಲವಾರು ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ.ನಾವು ಸಂಚಾರ ವ್ಯವಸ್ಥೆಯನ್ನು ವಿರೋಧಿಸುವುದಿಲ್ಲ. ಸಾರ್ವಜನಿಕರ ಸುರಕ್ಷತೆ ನಮಗೂ ಮುಖ್ಯ, ಆದರೆ ಸಂಚಾರ ವ್ಯವಸ್ಥೆಯಿಂದ ವ್ಯಾಪಾರಿಗಳಿಗೆ ಆಗುತ್ತಿರುವ ತೊಂದರೆಯನ್ನು ಪರಿಗಣಿಸಬೇಕು. ಜಿಲ್ಲಾಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರೀಶಿಲಿಸಬೇಕು. ಎಲ್ಲರಿಗೂ ಅನುಕೂಲವಾಗುವ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು.   

ಈ ನಮ್ಮ ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿದೆ. ನಾವು ಕಾನೂನಿಗೆ ಗೌರವವನ್ನು ನೀಡುತ್ತೇವೆ. ಅಧಿಕಾರಿಗಳ ಮೇಲೆ  ವಿಶ್ವಾಸವಿದೆ. ಈ ಮನವಿಯನ್ನು ಮಾನವೀಯ ದೃಷ್ಠಿಯಿಂದ ಪರಿಗಣಿಸಿ ಸಾರ್ವಜನಿಕರ ಹಾಗೂ ವ್ಯವಹಾರಗಳಿಗೆ ಸರಿದೂಗುವಂತಹ ಎಡಿಬಿ ರಸ್ತೆಯಲ್ಲಿನ ಏಕಮುಖ ಸಂಚಾರಿ ವ್ಯವಸ್ಥೆಯನ್ನು ರದ್ದುಗೊಳಿಸಿ ದ್ವಿಮುಖ ಸಂಚಾರ ವ್ಯವಸ್ಥೆಗೆ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಎಲ್ಲ ವ್ಯಾಪಾರಿಗಳ ಪರವಾಗಿ ಆಗ್ರಹಿಸುತ್ತೇವೆ ಎಂದರು.ವ್ಯಾಪಾರಸ್ಥರಾದಹನುಮಂತಪ್ಪ ಚಳಗೇರಿ,  ರಾಘವೇಂದ್ರ ರೇವಣಕರ್, ಕೈಲಾಸ್ ಬಾಟಿ,  ಜಿಕ್ರೀಯಾ ಕುಲಕರ್ಣಿ, ಬಸವರಾಜ ಕರೇಭರಮಣ್ಣನವರ, ಅಬ್ರರಾರ್ ಹಾನಗಲ್, ದೇವರಾಜ ಕಲಾಲ್,  ಬಸವರಾಜ ಕೆ, ಪರಮೇಶ ರಾಜಪುರೋಹಿತ, ಮಂಜುನಾಥ ಕಾಟೋಕರ್, ಪರಮೇಶಪ್ಪ ಹಾವನೂರು ಸೇರಿದಂತೆ ಮತ್ತಿತರರು ಇದ್ದರು.