ನೂರೈದು ಮಂದಿ ಬಿಜೆಪಿ ಶಾಸಕರು ಕಡಬು ತಿನ್ನುತ್ತಾ ಕೂರುವುದಿಲ್ಲ: ಎಚ್.ಡಿ. ಕುಮಾರ ಸ್ವಾಮಿ

ಹೆಚ್.ಡಿ. ಕೋಟೆ, ಫೆ 6 :   ಸರ್ಕಾರ ರಚಿಸಲು ಸಹರಿಸಿದ ಎಲ್ಲಾ ವಲಸಿಗರಿಗೆ ಸಚಿವ ಸ್ಥಾನ ನೀಡಿದ್ದು, ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಮೂಲ ಬಿಜೆಪಿಯಿಂದ ಗೆದ್ದಿರುವ 105 ಮಂದಿ ಶಾಸಕರು ಕಡಬು ತಿನ್ನುತ್ತಾ ಕುಳಿತಿರುವುದಿಲ್ಲ. ಮುಂದಿದೆ ಸಮಸ್ಯೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ. 

ಇಲ್ಲಿನ ಕಂಚಮಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ  ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಲೆಗಾರ. ಅವರಿಗೆ ಸರ್ಕಾರ ಉರುಳಿಸುವ, ಸರ್ಕಾರ ರಚಿಸುವ ಕಲೆ ಚೆನ್ನಾಗಿ ಕರಗತವಾಗಿದೆ. ಆದರೆ ಮೂಲ ಬಿಜೆಪಿ ಶಾಸಕರನ್ನು ಬಿಟ್ಟು ವಸಲಿಗರಿಗೆ ಆದ್ಯತೆ ನೀಡಿರುವುದು ಸರಿಯಲ್ಲ ಎಂದರು.  

ಈ ಹಿಂದೆ ಹಿಂದೆ ಏನೆಲ್ಲ ಮಾಡಿದರು, ಹೇಗೆ ಸರ್ಕಾರ ರಚಿಸಿದರು ಎಂಬುದನ್ನು ಜನ ನೋಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳುತ್ತೇನೆ. ಬೆಳಗ್ಗೆ ಒಂದು ತೀರ್ಮಾನ, ಮಧ್ಯಾಹ್ನ ಮತ್ತೊಂದು ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಹೀಗಿರುವಾಗ 105 ಜನ ಬಿಜೆಪಿ ಶಾಸಕರು ಕಡುಬು ತಿಂದುಕೊಂಡು ಕೂತಿರುತ್ತಾರೆಯೇ ಎಂದು ಪ್ರಶ್ನಿಸಿದರು. 

ಈಗ ಎಲ್ಲರೂ ಸುಮ್ಮನಿದ್ದಾರೆ. ಹಾಗೆಂದು ಮುಂದೆಯೂ ಸುಮ್ಮನಿರುತ್ತಾರೆ ಎಂದು ಭಾವಿಸುವುದು ಸರಿಯಲ್ಲ. ಮುಂದೆ ಯಾರನ್ನು ಯಾರು ಹೊಗಳುತ್ತಾರೆ ಕಾದು ನೋಡಿ. ಈಗ ಸಮಸ್ಯೆ ಇಲ್ಲ. ಮುಂದೆ ಏನಾಗುತ್ತದೆ ಎಂದು ಹೇಳಲು ತಾವು ಜ್ಯೋತಿಷಿ ಅಲ್ಲ. 

ಕೋಡಿ ಮಠದ ಸ್ವಾಮೀಜಿ ಅವರು ಸದ್ಯಕ್ಕೆ ಸರ್ಕಾರಕ್ಕೆ ಆಪತ್ತು ಇಲ್ಲ ಎಂದು ಹೇಳಿದ್ದಾರೆ.  ಸ್ವಲ್ಪ ಕಾಲ ಕಾದರೆ ನಿಮಗೆ ಎಲ್ಲವೂ ಗೊತ್ತಾಗುತ್ತದೆ ಎಂದರು.