ವಿವಿಧ ಕಾನೂನುಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ

One day training workshop on various laws

ವಿವಿಧ ಕಾನೂನುಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ 

ಧಾರವಾಡ 29: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡ ಮಕ್ಕಳ ಸಹಾಯವಾಣಿ-1098-112   ಸಂಯುಕ್ತಾಶ್ರಯದಲ್ಲಿ ಶಾಲೆಯಲ್ಲಿದೆ ಶಿಕ್ಷಣದೊಂದಿಗೆ ರಕ್ಷಣೆ ಎನ್ನುವ ಶೀರ್ಷಿಕೆಯಡಿ ಜಿಲ್ಲೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ಮಕ್ಕಳ ರಕ್ಷಣೆಗಾಗಿ ಇರುವ ಆರ್‌.ಟಿ.ಇ ಕಾಯ್ದೆ-2009, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ-2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಇಂದು (ಜ.29) ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಭಾ ಭವನದಲ್ಲಿ (ಎ.ಡಿ.ಆರ್) ಹಮ್ಮಿಕೊಳ್ಳಲಾಗಿತ್ತು. 

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು  ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು ಶಾಲೆಯಲ್ಲಿ ಶಿಕ್ಷಣವಿದೆ ಆದರೆ ರಕ್ಷಣೆಯಲ್ಲಿ ನಾವೆಲ್ಲರು ಹಿಂದೆ ಉಳಿಯುತ್ತಿದ್ದೇವೆ. ಸಮಾಜದ ರಾಷ್ಟ್ರ ನಿರ್ಮಾಣಕಾರರಾದ ಎಲ್ಲಾ ಬಿ.ಆರ್‌.ಪಿ. ಮತ್ತು ಸಿ.ಆರ್‌.ಪಿ.ಗಳು ಮಕ್ಕಳ ರಕ್ಷಣೆಯನ್ನು ಮಾಡುವಲ್ಲಿ ಶ್ರಮಿಸಬೇಕು. ಮಕ್ಕಳ ರಕ್ಷಣಾ ನೀತಿಯನ್ನು ಎಲ್ಲಾ ಶಾಲೆಯಲ್ಲಿ ಅನುಷ್ಠಾನಗೊಳಿಸಬೇಕು. ಮಕ್ಕಳ ಸುರಕ್ಷತಾ ಸಮಿತಿ, ಸಲಹಾ ಪೆಟ್ಟಿಗೆ, ಮಕ್ಕಳ ಸಹಾಯವಾಣಿ-1098 ನಾಮಫಲಕವನ್ನು ಅಳವಡಿಸಬೇಕು. ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ನಾವೆಲ್ಲರೂ ಹಿಂದೆ ಉಳಿಯುತ್ತಿದ್ದೇವೆ. ಆದ್ದರಿಂದ ಮಕ್ಕಳೊಂದಿಗೆ ಶಾಲೆಯಲ್ಲಿ ಹೆಚ್ಚು ಸಮಯವನ್ನು ಮೀಸಲಿರಿಸಿ ಗುಣಮಟ್ಟದ ಶಿಕ್ಷಣವನ್ನು ಒಗಿಸಬೇಕು ಅದರೊಂದಿಗೆ ಮಕ್ಕಳಿಗೆ ಶಿಕ್ಷಣದ ಜೊತೆ ರಕ್ಷಣೆಯ ಅವಶ್ಯಕತೆ ಇರುತ್ತದೆ. ಬಾಲ್ಯ ವಿವಾಹ ಕುರಿತು ಮಾಹಿತಿ ಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿ 1098 ಗೆ ಕರೆಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.  

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ  ಅವರು ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿದ್ದು, ಈ ಕುರಿತು ದೂರು ನೀಡಲು ಪಾಲಕರು ಹಲವಾರು ಕಾಣರಣಗಳಿಂದ ನಿರಾಕರಿಸುತ್ತಾರೆ. ಅಂತಹ ಪ್ರಕರಣಗಳು ಸುಮಾರು ಇದ್ದು ಹಾಗಾದರೆ ನಾವು ಎಲ್ಲಿ ತಪ್ಪುಗಳನ್ನು ಮಾಡುತ್ತಿದ್ದೇವೆ ಎನ್ನುವುದು ಗೊತ್ತಾಗುತ್ತಿಲ್ಲ. ಮಕ್ಕಳು ತುಂಬಾ ಆತಂಕದಲ್ಲಿ ಇರುತ್ತಾರೆ. ಅಂತಹ ವಿಚಾರದಲ್ಲಿ ಎಲ್ಲಾ ಶಿಕ್ಷಕರ ಪಾತ್ರ ತುಂಬಾ ದೊಡ್ಡದು, ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಕ್ಸೋ ಮತ್ತು ಬಾಲ್ಯವಿವಾಹಗಳ ಕುರಿತು ಹೆಚ್ಚು ಅರಿವುವನ್ನು ನೀಡಬೇಕು ಅಪ್ರಾಪ್ತ ಮಕ್ಕಳಿಗೆ ಹೆಚ್ಚು ಕಾನೂನು ಅರಿವನ್ನು ನೀಡಬೇಕು. ಜಿಲ್ಲಾ ಕಾನೂನು ಸೇವೆಗಳ ವತಿಯಿಂದ ಒದಗಿಸುತ್ತಿರುವ ಉಚಿತ ಕಾನೂನು ಸೇವೆಯ ಸದುಪಯೋಗವನ್ನು ಅವಶ್ಯಕತೆ ಇರುವವರು ಪಡೆದುಕೊಳ್ಳಬೇಕೆಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಹೆಚ್‌.ಹೆಚ್‌.ಕುಕನೂರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಜೇಶ್ವರಿ ಸಾಲಗಟ್ಟಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್‌.ಕೆಳದಿಮಠ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೋಮ್ಮಕ್ಕಣ್ಣವರ ಅವರು ಆರ್‌.ಟಿ.ಇ ಕಾಯ್ದೆ ಕುರಿತು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಪುನರ್ವಸತಿ ಕುರಿತು ಸವಿವರವಾಗಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ನಂತರ ಪ್ರಕಾಶ ಕೊಡ್ಲಿವಾಡ ರಕ್ಷಣಾಧಿಕಾರಿಗಳು ಅಸಾಂಸ್ಥಿಕ ಅವರು ಬಾಲನ್ಯಾಯ ಕಾಯ್ದೆ-2015 ರ ಕುರಿತು ಮತ್ತು  ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಲೀಗಲ್ ಕಂ ಪ್ರೋಬೆಷನ್ ಅಧಿಕಾರಿ ನೂರಜಹಾನ ಕಿಲ್ಲೆದಾರ  ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 (ಕರ್ನಾಟಕ ತಿದ್ದುಪಡಿ ಕಾಯ್ದೆ-2016, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 ಕುರಿತು ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಉಪನ್ಯಾಸವನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.  ಮಹ್ಮದಅಲಿ ತಹಶೀಲ್ದಾರ ಅವರು ನಿರೂಪಿಸಿ, ವಂದಿಸಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು.