ಒನಕೆ ಓಬವ್ವ ಭಾರತದ ಧೀರ ಮಹಿಳೆಯಾಗಿದ್ದಳು: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ಒನಕೆ ಓಬವ್ವ ಭಾರತದ ಧೀರ ಮಹಿಳೆಯಾಗಿದ್ದಳು: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ Onake Obavva was a brave woman of India: Additional District Magistrate Sidrameshwar


ಕೊಪ್ಪಳ  11:  ಒನಕೆ ಓಬವ್ವ ಭಾರತದ ಧೀರ ಮಹಿಳೆಯಾಗಿದ್ದು, ಅವರ ಗುಣಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. ಅವರು ಮಂಗಳವಾರ ಒನಕೆ ಓಬವ್ವ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಒನಕೆ ಓಬವ್ಬ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.ಓಬವ್ವ  ಕರ್ನಾಟಕ ಅಷ್ಟೇ ಅಲ್ಲ, ಅವರು ಭಾರತದ ಮಾಣಿಕ್ಯ ಆಗಿದ್ದಾರೆ. ಪುರುಷರಿಗಿಂತ ಹೆಚ್ಚಿನ ಶೌರ್ಯದಿಂದ ಓಬವ್ಬ ಶತ್ರು ಸೈನ್ಯ ಚಿತ್ರದುರ್ಗ ಕೋಟೆಗೆ ನುಗ್ಗಿದಾಗ ಒಬ್ಬೊಬ್ಬರನ್ನಾಗಿ ಸದೆ ಬಡೆದ ಅವರ ಧೈರ್ಯ ಮತ್ತು ಸಾಹಸವನ್ನು  ಇಂದು ನಾವು ಸ್ಮರಿಸಲೇಬೇಕಿದೆ. ಅವರೊಬ್ಬ ಧೀರ ಮಹಿಳೆಯಾಗಿದ್ದರು ಎಂದರು. ಸಮಾಜದ ಮುಖಂಡರ ಸಲಹೆಯಂತೆ ಈ ಸಲ ಒನಕೆ ಓಬವ್ಬ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಬರುವ ವರ್ಷ ಈ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಚಿತ್ರದುರ್ಗದ ರಾಜ ವೀರ ಮದಕರಿ ನಾಯಕನ ಆಪ್ತ ಸೇವಕನಾಗಿ  ಸೇವೆ ಸಲ್ಲಿಸುತ್ತಿದ್ದ ಮುದ್ದ ಹನುಮಪ್ಪನ ಸಾತ್ವಿಕ ಸತಿಯಾಗಿ ಬಾಳಿ ಬೆಳಗಿದ ಓಬವ್ವ ಕೇವಲ ವ್ಯಕ್ತಿಯಲ್ಲ  ಒಂದು ಶಕ್ತಿಯ ಪುಂಜವಾಗಿದ್ದ ವೀರವನಿತೆ.  ತಮಗೆಲ್ಲರಿಗೂ ಒನಕೆ ಓಬವ್ವ ಜಯಂತಿಯ ಶುಭಾಶಯಗಳು ಎಂದು ಹೇಳಿದರು.ಸಮಾಜದ ಮುಖಂಡರಾದ ಕೃಷ್ಣ ಇಟ್ಟಂಗಿ ಮಾತನಾಡಿ, ಒನಕೆ ಓಬವ್ವ ಜಯಂತಿಯನ್ನು ಹಿಂದಿನ ಸರ್ಕಾರದಲ್ಲಿ ಜಾರಿಗೆ ತರಲಾಗಿದ್ದು. ಪ್ರತಿ ವರ್ಷ ಈ ಜಯಂತಿಯನ್ನು ಎಲ್ಲಾ ಸರ್ಕಾರಗಳು ಆಚರಿಸುತ್ತಾ ಬರುತ್ತಿವೆ. ಈ ವರ್ಷ ಸಮಯದ ಅಭಾವದಿಂದ ಸರಳವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಚರಿಸುವ ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಹೇಳಿದರು.ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಪ್ಷಲತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ಚಲವಾದಿ ಸಮಾಜದ ಜಿಲ್ಲಾಧ್ಯಕ್ಷರಾದ ಸಿದ್ರಾಮ ಹೊಸಮನಿ, ಕೊಪ್ಪಳ ನಗರಸಭೆ ಸದಸ್ಯರಾದ ರಾಜಶೇಖರ, ತಹಶೀಲ್ದಾರರಾದ ರಾಜು ಪಿರಂಗಿ, ರವಿಕುಮಾರ್, ಚಲವಾದಿ ಸಮಾಜದ ಮುಖಂಡರಾದ ಗವಿಸಿದ್ದಪ್ಪ ಬೆಲ್ಲದ, ಹನುಮಂತಪ್ಪ, ಶಾಂತಕುಮಾರ್, ಗವಿಸಿದ್ದಪ್ಪ ಚಲವಾದಿ, ಡಿ.ಕೆ. ಬೆಲ್ಲದ, ಶಿವಾನಂದ ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.