ಬರಪೀಡಿತ ತಾಲೂಕುಗಳ ಘೋಷಣೆಗೆ ಆಗ್ರಹ

ಬರಪೀಡಿತ ತಾಲೂಕುಗಳ ಘೋಷಣೆಗೆ ಆಗ್ರಹ  Demand to declare drought-hit taluks

ಲೋಕದರ್ಶನ ವರದಿ

ವಿಜಯಪುರ 27: ರಾಜ್ಯದಲ್ಲಿ ಈ ಹಿಂದೆಂದೂ ಕಂಡುಬರದ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಸರ್ಕಾರ ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ ವಿಜಯಪುರ, ಕೊಲ್ಹಾರ ಹಾಗೂ ನಿಡಗುಂದಿ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಖಂಡನೀಯ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಜಿಲ್ಲೆಯಾದ್ಯಂತ ಮಳೆ ಕೊರತೆಯಿಂದ ಬೆಳೆಗಳು ಹಾನೀಗೀಡಾಗಿದ್ದು, ಭೀಕರ ಬರಗಾಲದ ಆತಂಕ ಎದುರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಕೂಡ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಕಮರಿ ಹೋಗಿವೆ ಎಂದು ಹೇಳಿಕೆ ನೀಡಿದ್ದಾರೆ.ಆದರೂ ಕೇವಲ ಮೂರು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಉಳಿದ ತಾಲೂಕುಗಳಿಗೆ ಮಲತಾಯಿ ಧೋರಣೆ ಅನುಸರಿಸಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದ್ದಾರೆ.  

ಉಳಿದ 10 ತಾಲೂಕುಗಳಲ್ಲಿ ಯಾವ ಭಾಗದಲ್ಲಿ ಮಳೆಯಾಗಿದೆ, ಯಾವ ಬೆಳೆಗಳು ಉತ್ತಮವಾಗಿವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. ಈಗಾಗಲೇ ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆಯೆಂಬ ಹಣೆಪಟ್ಟಿ ಹೊಂದಿದ್ದು, ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.  

ಬರಪೀಡಿತ ಜಿಲ್ಲೆಯೆಂದು ಘೋಷಿಸಿ ಬೆಳೆ ಪರಿಹಾರ ನೀಡುವುದರ ಜತೆಗೆ ಕೃಷಿಗಾಗಿ ರೈತರು ಸಹಕಾರಿ ಸಂಘಗಳಲ್ಲಿ ಪಡೆದಿರುವ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದ್ದಾರೆ.  

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ರೈತಪರ ಸರ್ಕಾರವೆಂದು ಹೇಳಿಕೊಳ್ಳುವುದನ್ನು ಬಿಟ್ಟು, ಬರಪೀಡಿತ ಎಲ್ಲ ತಾಲೂಕುಗಳನ್ನು ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.