ರಸ್ತೆ ಅಪಘಾತದಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಚಿಕ್ಕಪ್ಪ ಅಜ್ಜಿ ಸಾವು

Olympic medalist Manu Bhakar's uncle and grandmother died in accident

ಚಂಡೀಗಢ 19: ಹರಿಯಾಣದ ಚಾರ್ಖಿ ದಾದ್ರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ  ಒಲಿಂಪಿಕ್ ಕಂಚಿನ ಪದಕ ವಿಜೇತೆ ಮನು ಭಾಕರ್ ಅವರ ಚಿಕ್ಕಪ್ಪ ಮತ್ತು ಅಜ್ಜಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಪ್ಪ ಯುದ್ಧ್‌ವೀರ್ ಸಿಂಗ್ ಮತ್ತು ಅಜ್ಜಿ ಸಾವಿತ್ರಿ ದೇವಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರಾಂಗ್‌ ಸೈಡ್‌ನಿಂದ ವೇಗವಾಗಿ ಬಂದ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮನು ಭಾಕರ್‌ ಅವರ ಚಿಕ್ಕಪ್ಪ, ಅಜ್ಜಿ ಸ್ಥಳದಲ್ಲೇ ಪ್ರಾಣ ಚೆಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಢಿಕ್ಕಿಯ ರಭಸಕ್ಕೆ ಕಾರು ಕೂಡ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಇಬ್ಬರು ನೆಲಕ್ಕೆ ಎಸೆಯಲ್ಪಟ್ಟಿದ್ದು, ಕಾರು ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ ಎಂದು ವರದಿ ತಿಳಿಸಿದೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುದ್ಧ್‌ವೀರ್ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ಅವರ ತಾಯಿ ಸಾವಿತ್ರಿ ದೇವಿ ಲೋಹರು ಚೌಕ್‌ನಲ್ಲಿರುವ ತನ್ನ ಕಿರಿಯ ಮಗನನ್ನು ಭೇಟಿ ಮಾಡಲು ಅವರೊಂದಿಗೆ ಬಂದಿದ್ದರು. ಇಬ್ಬರೂ ಕಲ್ಯಾಣ ಮಾಡ್ ಪ್ರದೇಶವನ್ನು ತಲುಪುತ್ತಿದ್ದಂತೆ ರಸ್ತೆಯ ಇನ್ನೊಂದು ಬದಿಯಿಂದ ವೇಗವಾಗಿ ಬಂದ ಬ್ರೆಜ್ಜಾ ಕಾರು ಅವರ ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸದ್ಯ ಪೊಲೀಸರು ಈ ಕುರಿತು ಹಿಟ್‌ & ರನ್‌ ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
ಇತ್ತೀಚೆಗಷ್ಟೇ ಮನು ಭಾಕರ್‌ ರಾಷ್ಟ್ರಪತಿ ಅವರಿಂದ ʼಖೇಲ್‌ ರತ್ನʼ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.