ಅಧಿಕಾರಿಗಳಿಗೆ ಶಿಸ್ತು, ಕಾರ್ಯ ಬದ್ಧತೆ ಇರಬೇಕು: ಡಾ. ರಾಮ್ ಪ್ರಸಾತ್ ಮನೋಹರ್ ವಿ.
ಧಾರವಾಡ 05: ಧಾರವಾಡ ಜಿಲ್ಲೆ ರಾಜ್ಯದ ಮಧ್ಯಭಾಗದಲ್ಲಿದ್ದು, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಅಭಿವೃದ್ಧಿ ದೃಷ್ಠಿಯಿಂದ ಮಹತ್ವದ ಸ್ಥಾನದಲ್ಲಿದೆ. ಜಿಲ್ಲೆಯ ಪ್ರಗತಿ ಮತ್ತು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಅಧಿಕಾರಿಗಳಲ್ಲಿ ಶಿಸ್ತು, ಕಾರ್ಯ ಬದ್ಧತೆ ಇರಬೇಕು. ಸರಕಾರದಿಂದ ಜಿಲ್ಲೆಗೆ ಅನುಮೊದನೆಗೊಂಡಿರುವ ಮತ್ತು ಬಿಡುಗಡೆ ಆಗಿರುವ ಅನುದಾನದ ಸಂಪೂರ್ಣ ಬಳಕೆ ಆಗಬೇಕು. ಅನುದಾನ ಲ್ಯಾಪ್ಸ್ ಆದರೆ ಸಂಬಂಧಿತ ಅಧಿಕಾರಿಯನ್ನು ಜವಾಬ್ದಾರಗೊಳಿಸಿ ಸೂಕ್ತ ಕ್ರಮ ಜರುಗಿಸುವದಾಗಿ ಧಾರವಾಡ ಜಿಲ್ಲೆಯ ನೂತನ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ ಆಡಳಿತಾಧಿಕಾರಿ ಡಾ. ರಾಮ್ ಪ್ರಸಾತ್ ಮನೋಹರ ವಿ. ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಜಿಲ್ಲೆಯ ಅಭಿವೃದ್ಧಿಗೆ ಇಲಾಖೆ ಇಲಾಖೆಗಳ ಮಧ್ಯದಲ್ಲಿ, ಇಲಾಖೆ ಜನಪ್ರತಿನಿಧಿಗಳ ಮಧ್ಯದಲ್ಲಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ನಿರಂತರ ಇರಬೇಕು. ಇಲಾಖೆ ಕೆಲಸ ಕಾರ್ಯಗಳಲ್ಲಿ ಶಿಸ್ತು ಬದ್ದತೆ ಇರಬೇಕು. ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಕ್ಷೇತ್ರ ಮಟ್ಟದ ಸಿಬ್ಬಂದಿಗಳೊಂದಿಗೆ ನೇರ ಸಂಪರ್ಕವಿದ್ದು, ಕಾಲಕಾಲಕ್ಕೆ ಕಾಮಗಾರಿ, ಯೋಜನೆಗಳ ಪ್ರಗತಿಯನ್ನು ಪರೀಶೀಲಿಸಿ, ಅದರ ಪ್ರಾಥಮಿಕ ಮಾಹಿತಿ ಹೊಂದಿರಬೇಕು. ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ಲೋಪ, ಕಳಪೆ ಕಂಡು ಬಂದಲ್ಲಿ ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರನ್ನು ಹೋಣೆಗಾರರನ್ನಾಗಿ ಮಾಡಿ, ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು ಇಲಾಖೆ ಕಾರ್ಯಕ್ರಮಗಳ ಪೂರ್ಣ ಮಾಹಿತಿ ಹೊಂದಿರಬೇಕು ಎಂದು ಅವರು ತಿಳಿಸಿದರು.
ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡುವಾಗ ಸಣ್ಣ ಮತ್ತು ಮಧ್ಯಮ ರೈತರಿಗೆ ಆದ್ಯತೆ ನೀಡಬೇಕು. ಧ್ವನಿ ಇಲ್ಲದವರಿಗೆ ನಾವು ಶಕ್ತಿ ತುಂಬಬೇಕು. ಅರ್ಹರಿಗೆ, ಬಡವರಿಗೆ ಸರಕಾರದ ಸವಲತ್ತುಗಳು ನಿಯಮಾನುಸಾರ ಪಾರದರ್ಶಕವಾಗಿ ತಲುಪಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಯಾವೊಬ್ಬ ಸರಕಾರಿ ನೌಕರ ಮರೆಯಬಾರದು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ವಿ ಅವರು ಹೇಳಿದರು.
ರೈತರಿಗೆ ಬೆಳೆ ಪರಿಹಾರ ನೀಡುವುದು ಸರಕಾರದ ತತಕ್ಷಣದ ಪರಿಹಾರವಾಗಿದೆ. ಅವರಿಗೆ ಬೆಳೆ ವಿಮೆ ಪರಿಹಾರ ಸೀಗುವಂತೆ ಮಾಡುವ ನೈತಿಕ ಜವಾಬ್ದಾರಿಯು ನಮಗಿದೆ. ಬೆಳೆ ವಿಮೆ ಬಗ್ಗೆ ಜನವರಲ್ಲಿ ವ್ಯಾಪಕ ಪ್ರಚಾರ, ತಿಳುವಳಿಕೆ ನೀಡಬೇಕು ಎಂದು ಹೇಳಿದರು.
ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಆಧ್ಯತೆ ನೀಡಬೇಕು. ಸರ್ಕಾರದ ಸವಲತ್ತುಗಳು ಅರ್ಹರಿಗೆ ಮಾತ್ರ ಮುಟ್ಟಬೇಕು ಎಂದರು.
ರೈತರಿಗೆ ಜಾನುವಾರುಗಳೆ ಜೀವನ. ಜಿಲ್ಲಾ ಗಡಿಗಳಲ್ಲಿ ರಿಂಗ್ ವ್ಯಕ್ತಿನೇಷನ್ ಮಾಡಿಸಬೇಕು. ಎಲ್ಲ ಹಸು, ದನಕರುಗಳನ್ನು ಲಸಿಕಾಕರಣಕ್ಕೆ ಒಳಪಡಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಶಾಲೆ, ಅಂಗನವಾಡಿಗಳ ದುರಸ್ತಿ ಪೂರ್ಣಗೊಳಿಸಿ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಜಿಲ್ಲೆಯ ಅಗತ್ಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆ ಇದ್ದರೆ, ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಅನುದಾನ ಬಿಡುಗಡೆಯಾದ ಕಾಮಗಾರಿಗಳು ಕಳಪೆ ಆಗಿರದೆ, ಗುಣಮಟ್ಟದಿಂದ ಕೂಡಿರಬೇಕು. ಮತ್ತು ನಿಗಧಿತ ಅವಧಿಯಲ್ಲಿ ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.
ಸಭೆಗೆ ಗೈರಾದ ಮೂವರಿಗೆ ಶೋಕಾಸ ನೋಟಿಸ್: ಇಂದಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರಗತಿ ಪರೀಶೀಲನಾ ಸಭೆಗೆ ಅನುಮತಿ ಪಡೆಯದೆ ಗೈರಾಗಿದ್ದ ಮೂವರು ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ವಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅನುಮತಿ ಪಡೆಯದೆ ಸಭೆಗೆ ಗೈರಾಗಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಎಚ್.ಜಿ. ಗುಂಡಳ್ಳಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಅಮೃತ ಸೊಳಂಕಿ, ಬೃಹತ ಮತ್ತು ಮಧ್ಯಮ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮುರನಾಳ ಅವರಿಗೆ ಇಂದೇ ನೋಟಿಸ್ ಕಳುಹಿಸಿ, ಉತ್ತರ ಪಡೆಯಲು ಅವರು ಹೇಳಿದರು.
ಅಧಿಕಾರಿಗಳು ಪ್ರಗತಿ ಪರೀಶೀಲನಾ ಸಭೆಗಳಿಗೆ ಗೈರು ಹಾಜರಾಗುವುದು ಅವರಲ್ಲಿನ ಕಾರ್ಯ ವೈಫಲ್ಯತೆ ಮತ್ತು ಕೆಲಸದಲ್ಲಿ ಆಸಕ್ತಿ ಇಲ್ಲದಿರುವದನ್ನು ತೋರಿಸುತ್ತದೆ. ಇಂತಹ ಅಶಿಸ್ತನ್ನು ಸಹಿಸಲಾಗುವುದಿಲ್ಲ ಎಂದು ಸಭೆಯಲ್ಲಿನ ಅಧಿಕಾರಿಗಳಿಗೆ ಅವರು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಪಕ್ಷಿ ನೋಟ, ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಕುರಿತು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸ್ವಾಗತಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವೇದಿಕೆಯಲ್ಲಿ ಇದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ, ನಿಗಮ ಮಂಡಳಿಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.