ಕರ್ತವ್ಯಕ್ಕೆ ಪಾಲಿಸುವುದೇ ಮನುಷ್ಯ ಧರ್ಮ

ಹುಟ್ಟಿದ ಮಗುವಿನಿಂದ ಸಾಯುವವರೆಗೂ ಮನುಷ್ಯರಿಗೆ ಒಂದು ಧರ್ಮದ ಚೌಕಟ್ಟು ಇದ್ದಿರುತ್ತದೆ. ಅದನ್ನು ಪಾಲಿಸುವುದು ಸುಲಭದ್ದಲ್ಲದೇ ಹೋದರು ನಮ್ಮ ಧರ್ಮವನ್ನು ನಾವು ಪಾಲಿಸಿದರೆ ಧರ್ಮ ನಮ್ಮನ್ನು ಪಾಲಿಸುತ್ತದೆ ಎನ್ನುವ ಮಾತು ಇದೆ. ನಮ್ಮ ಸನಾತನ ಪದ್ಧತಿಯ ಪ್ರಕಾರ ಸತ್ಯ, ನ್ಯಾಯ, ನೀತಿಯಿಂದ ನಡೆದರೆ ಅದು ಧರ್ಮವಾಗುತ್ತದೆ. ಸುಳ್ಳು, ಅನ್ಯಾಯ ಕೆಟ್ಟ ಕೆಲಸ ಮಾಡುವುದು ಅಧರ್ಮ ಎನ್ನಿಸುತ್ತದೆ. ಹಾಗಾಗಿ ನಾವು ಯಾವುದನ್ನು ಪಾಲಿಸಬೇಕು ಎನ್ನುವ ಆಯ್ಕೆ ನಮ್ಮದೇ ಆಗಿರುತ್ತದೆ. ನಮ್ಮ ಮಾರ್ಗ ಧರ್ಮದ್ದೋ ಅಧರ್ಮದ್ದೋ ಎಂದು ಎಂದು ಸಣ್ಣ ವಿವೇಚನೆ ಇಟ್ಟುಕೊಂಡರೆ ಬಹುಶಹ ತಪ್ಪು ಮಾಡುವ ಸಂದರ್ಭಗಳು ಬಹಳವೇ ಕಡಿಮೆಯಾಗಿರುತ್ತದೆ. 

ಧರ್ಮ ನಿಭಾಯಿಸುವುದರ ಸರಳ ಅರ್ಥ ಕರ್ತವ್ಯ ಪಾಲಿಸುವುದು ಎಂದಷ್ಟೆ. ಯಾವತ್ತು ತನ್ನ ನಿತ್ಯದ ಕರ್ತವ್ಯವನ್ನು ಚಾಚು ತಪ್ಪದೇ ನಡೆಸುತ್ತಾನೋ ಅಲ್ಲಿಗೆ ಧರ್ಮಾಚರಣೆ ಆಗುತ್ತಿರುತ್ತದೆ. ಒಂದು ಪುಟ್ಟ ಕುಟುಂಬ. ಆ ಕುಟುಂಬದಲ್ಲಿ ಗಂಡ ಹೆಂಡತಿ ಎರಡು ಮಕ್ಕಳು. ನಾಲ್ವರದ್ದು ಬೇರೆ ಬೇರೆ ದಿಕ್ಕು. ಗಂಡ ದುಡಿದಿದ್ದೆಲ್ಲ ಕುಡತಕ್ಕೆ ಹಾಕಿ ಹಣ ಕಾಲಿ ಮಾಡುತ್ತಾನೆ. ಹೆಂಡತಿ ತಾನು ದುಡಿದದ್ದು ಮನೆ ಖರ್ಚಿಗೆ ಒಂದಷ್ಟು ಇಟ್ಟುಕೊಂಡು ಬಟ್ಟೆ ಒಡವೆ ಅಂತ ಖರ್ಚು ಮಾಡುತ್ತಿದ್ದಳು. ದೊಡ್ಡವನು ಮಗ ಕಾಲೇಜು ಕಲಿಯುತ್ತಲೇ ಒಂದು ಪುಟ್ಟ ಕೆಲಸವನ್ನೇನೋ ಮಾಡುತ್ತಿದ್ದ. ಬಂದ ಹಣವನ್ನೇಲ್ಲ ಸ್ನೇಹಿತರ ಜೊತೆ ತಿರುಗಾಡಿ ಮೋಜು ಮಾಡಿ ಮುಗಿಸುತ್ತಿದ್ದ. ಚಿಕ್ಕವಳು ಮಗಳು ಅವಳದ್ದು ದುಡಿತವಿಲ್ಲ ದೊಡ್ಡವರು ಮೂರು ಜನರಿಂದ ಅಷ್ಟಿಷ್ಟು ಪಡೆದು ಸಣ್ಣ ಪುಟ್ಟ ಖರ್ಚು ಮಾಡುತ್ತಿದ್ದಳು. ಹೀಗಿರುವಾಗ ಮನೆಯ ಸ್ಥಿತಿ ತೀರ ಹದಗೆಟ್ಟಿತ್ತು. ಒಡೆದ ಹಂಚುಗಳ ಬದಲಿಗೆ ಹೊಸ ಹಂಚು ಹಾಕಲು ಯಾರು ತಯಾರಿಲ್ಲ. ಕರೆಂಟ್ ಬಿಲ್ ಕಟ್ಟಲು ಮೂವರು ನೀನು ಕಟ್ಟು ನೀನು ಕಟ್ಟು ಎನ್ನುತ್ತಿದ್ದರು. ಮನೆಯಲ್ಲಿ ಒಂದೊಂದು ದಿನದ ಗಂಜಿಗೂ ಅಕ್ಕಿ ಇರುತ್ತಿರಲಿಲ್ಲ. ಮನೆಯಲ್ಲಿ ಬಡತನವಿದ್ದರು ತಮ್ಮತಮ್ಮ ಶೋಕಿಗಳಿಗೆ ಕಡಿಮೆ ಇರಲಿಲ್ಲ. ಉಳಿತಾಯವಂತೂ ಇಲ್ಲವೇ ಇಲ್ಲ. ಮನೆ ಬಾಗಿಲಿಗೆ ಬಂದ ಬಂಧುಬಾಂದವರಿಗೆ ಉಪಚಾರ ಮಾಡಿದ್ದೂ ಇಲ್ಲ. ತಮ್ಮತಮ್ಮ ಕರ್ತವ್ಯ ಮರೆತು ಬಿಟ್ಟಿದ್ದರು. ಹಾಗಿರುವಾಗ ಒಂದು ದಿನ ಮನೆಯ ಯಜಮಾನನ ಕುಡಿತದ ಚಟಕ್ಕೆ ರೋಗವೊಂದು ಬಂದು ತಗುಲಿತು. ಅವನಿಗೆ ದೊಡ್ಡ ಆಫರೇಶನ್ ಆಗಬೇಕು ಎಂದರು ವೈದ್ಯರು. ಆಗ ಮನೆಯವರೆಲ್ಲ ಕಂಗಾಲಾಗಿ ಕುಳಿತರು. ಗೊಳೋ ಎಂದು ಅತ್ತರು. ಹಾಗೆ ಅಕ್ಕಪಕ್ಕದವರ ಮನೆಯಲ್ಲಿ ಸಾಲ ಕೇಳಿದರು. ಇವರ ನಿತ್ಯ ಜೀವನದ ಸಂಗತಿಗಳೆಲ್ಲ ಗೊತ್ತಿದ್ದವರು ಹಣ ನೀಡಲಿಲ್ಲ. ಮನೆಯ ಯಜಮಾನಿ ಊರಲ್ಲಿರುವ ಒಬ್ಬ ಸನ್ಯಾಸಿಯ ಬಳಿ ಹೋಗಿ ತನ್ನ ಗೋಳು ಹೇಳಿಕೊಂಡಳು. ‘ಅಮ್ಮಾ ಕಷ್ಟ ಎನ್ನುವದು ಎಲ್ಲರಿಗೂ ಬರುತ್ತದೆ. ನೀವು ಮೂವರು ದುಡಿಯುವವರು. ನಾಲ್ಕು ಜನ ಮಾತ್ರ ತಿನ್ನುವುದು. ಅಚ್ಚುಕಟ್ಟಾಗಿ ಚೆಂದವಾಗಿ ಸಾಗಿಸಬೇಕಿದ್ದ ಜೀವನ ಕೈಯಾರೆ ದುಂದುವೆಚ್ಛ ಮಾಡಿ ಹಾಳುಮಾಡಿಕೊಂಡಿದ್ದೀರಿ. ಮನೆಯಲ್ಲಿ ಅಕ್ಕಿ ಇಲ್ಲ, ಹತ್ತು ರೂಪಾಯಿ ಕೂಡಿಡಬೇಕು ಕಷ್ಟಕ್ಕೆ ಬೇಕು ಎನ್ನುವ ಯೋಚನೆ ಇಲ್ಲ, ದಾನಧರ್ಮವಂತು ಕೇಳಲೇ ಬೇಡಿ. ಕೇವಲ ತಕ್ಷಣದ ಆಸೆಗಳು ಪೂರೈಸಿಕೊಳ್ಳುತ್ತ ಮಾತ್ರ ನೋಡಿದಿರಿ. ಒಂದು ಕುಟುಂಬದ ನಿರ್ವಹಣೆಯ ಕರ್ತವ್ಯವನ್ನು ಯಾರೊಬ್ಬರೂ ಪಾಲಿಸಲೇ ಇಲ್ಲ. ನಿಮ್ಮದೇ ಕುಟುಂಬ, ನಿಮ್ಮದೇ ದೇಹದ ಭಾಗಗಳು ಗಂಡ ಮಕ್ಕಳು, ಮನೆಯ ಲಕ್ಷ್ಮಿ ನೀನು, ನಿಮ್ಮ ನಿಮ್ಮ ಜವಬ್ದಾರಿ ಮರೆತು ವರ್ತಿಸಿಬಿಟ್ಟಿರಿ. ಈಗ ಅತ್ತರೆ ಪ್ರಯೋಜನ ಏನು. ಸರಿಯಾದ ರೀತಿಯಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡಿದ್ದರೆ ಈಗ ಈ ಪರಿಸ್ಥಿತಿ ಬರುತ್ತಿತ್ತೇ! ಗೃಹಸ್ಥ್ತಧರ್ಮ ಪಾಲಿಸಲಿಲ್ಲ. ಆ ಧರ್ಮ ನಿಮ್ಮ ಕೈ ಹಿಡಿಲಿಲ್ಲ. ನಾವು ಏನು ಕೊಡುತ್ತೇವೋ ಅದನ್ನೇ ಪಡೆಯುತ್ತೇವೆ. ಇದರ ಅರ್ಥ ಇಷ್ಟೆ ಎಂದು ಹೇಳಿ ಕಳುಹಿಸಿದರು. 

ಧರ್ಮವು ಆಚಾರ ಮತ್ತು ವಿಚಾರಗಳ ಮೂಲಕ ಅಭಿವ್ಯಕ್ತವಾಗುತ್ತದೆ. ಒಂದು ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಧರ್ಮ ಎನ್ನಿಸಿಕೊಳ್ಳುವುದಿಲ್ಲ. ಜಗತ್ತಿನ ಸಕಲವೂ  ಹಿತವಾಗಿ ಇರಲೇಂದು ಬಯಸುವುದು ಧರ್ಮ.  ಸ್ವಾಮಿ ವಿವೇಕಾನಂದರು ಚಿಕಾಗೋದ ನೆಲದಲ್ಲಿ ನಿಂತು ಸಭೆಯಲ್ಲಿದ್ದ ಎಲ್ಲರನ್ನು ಉದ್ದೇಶಿಸಿ ಸಹೋದರ ಸಹೋದರಿಯರೇ ಎಂದು ಭಾಷಣ ಆರಂಭಿಸಿದರಲ್ಲ ಅದು ಧರ್ಮದ ಮಾತು. ಮನಸ್ಸು ನಮ್ಮ ಹಿಡಿತದಲ್ಲಿದ್ದಲ್ಲಿ ಧರ್ಮ ಪಾಲನೆ ಸುಲಭ. ನಮ್ಮ ಮನಸ್ಸು ಬೇಕಾಬಿಟ್ಟಿ ಹರಿಬಿಟ್ಟು ನಡೆದರೆ ಅಲ್ಲಿ ಅಧರ್ಮವೆಂಬುದು ಸದ್ದಿಲ್ಲದೇ ಆವರಿಸಿಕೊಂಡು ಬಿಡುತ್ತದೆ. ಬಸವಣ್ಣ ಹೇಳಿದ ಕಾಯಕವೇ ಕೈಲಾಸ ಎನ್ನುವ ಒಂದು ವಾಕ್ಯ ನಮ್ಮನ್ನ ಧರ್ಮ ಪಥದಲ್ಲಿ ನಡೆಸಲು ಸಹಾಯ ಮಾಡುತ್ತದೆ.  

ನಮ್ಮ ಲಕ್ಷ್ಯ ಇರಬೇಕಾದುದು ನಾವೇನು ಮಾಡಬೇಕು ಎನ್ನುವದು. ಅದರ ಬದಲಾಗಿ ಈಗೆಲ್ಲ ನೀವೇನು ಮಾಡಬೇಕು ಎನ್ನುವ ಉಪದೇಶವೇ ಹೆಚ್ಚಾಗಿ ಬಿಟ್ಟಿದೆ. ಎಡಬಲ ಎನ್ನುವ ಪಂಥಗಳು ಸೃಷ್ಟಿಸಿಕೊಂಡು ಒಬ್ಬರಿಗೊಬ್ಬರು ಬುದ್ಧಿ ಹೇಳಿಕೊಳ್ಳುತ್ತ ಇರುವುದು ಕಾಣುತ್ತೇವೆ. ಆದರೆ ತಾವು ತಿನ್ನುವುದು ಮಶಿಕೆಂಡ ಬೇರೆಯವರಿಗೆ ತಿನ್ನು ಎನ್ನುವದು ಬದನೆಕಾಯಿ ಆಗಬಾರದಲ್ಲವೆ. ಒಂದು ಧರ್ಮವನ್ನು ಉಳಿಸಬೇಕಾದರೆ ಸ್ವತಃ ಕಾರ್ಯಕ್ಕೆ ಇಳಿಯಬೇಕು. ಅದನ್ನು ನೋಡಿ ಸ್ಪೂರ್ತಿ ಪಡೆದು ಉಳಿದವರು ಪಾಲಿಸುವಂತಾಗಬೇಕು ವಿನಹ ಇನ್ನೊಬ್ಬ ಮಾಡಿದ್ದೆಲ್ಲ ತಪ್ಪು ಎಂದು ಹೇಳುವುದು, ಅಸಂಬದ್ಧ ಹೇಳಿಕೆ ನೀಡುವುದು, ಅಧರ್ಮ ಎಂದು ಗೊತ್ತಿದ್ದು ಕೂಡ ಸಮರ್ಥಿಸುವುದು, ಅಧರ್ಮ ಪಾಲಕರಿಗೆ ಸಹಾಯಕರಾಗಿ ನಿಲ್ಲುವುದು. ಇದರಿಂದ ಕೇವಲ ಧರ್ಮ ನಾಶವೊಂದೆ ಅಲ್ಲ ಮನುಕುಲವೂ ನಾಶವಾಗುತ್ತದೆ ಎನ್ನುವ ಸಣ್ಣ ಯೋಚನೆ ಮಾಡುತ್ತಿಲ್ಲ ಎನ್ನುವದು ದುರಂತ.  

ಧರ್ಮದ ವ್ಯಾಖ್ಯಾನ ಮಾಡುವುದು ಅಷ್ಟು ಸುಲಭದ್ದಲ್ಲ ಎಂದು ಹಿರಿಯರು ಹೇಳುತ್ತಾರೆ. ಆದರೆ ನಮ್ಮ ಧರ್ಮ ನಮ್ಮನ್ನು ರಕ್ಷಿಸಬೇಕು, ನಮ್ಮನ್ನು ಸನ್ನಡೆತೆಗೆ ಬದ್ಧರಾಗಿಸಬೇಕು, ಬುದ್ಧಿಗೆ ಒಳ್ಳೆಯದನ್ನೇ ಉಪದೇಶಿಸಬೇಕು. ಕೆಟ್ಟದ್ದನ್ನು ನಿಗ್ರಹಿಸಿ ಮುಂದೆ ಹೋಗುವ ಶಕ್ತಿ ತುಂಬಬೇಕು, ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿದ್ದಾರೆ. ಸ್ವರ್ಗ ಅಂದರೆ ನಮ್ಮ ಧರ್ಮಾಚರಣೆಯ ಪಾಲನೆ. ಕೆಟ್ಟ ಧರ್ಮಾಚರಣೆಯೇ ನರಕ ಎಂದಲ್ಲವೆ. ಹಾಗಿರುವಾಗ ನಮ್ಮ ಪಯಣದ ದಿಕ್ಕು ಹೇಗಿರಬೇಕು ಎನ್ನುವದು ಒಂದು ಕ್ಷಣ ಯೋಚಿಸಬೇಕು ಅನ್ನಿಸದೆ ಇರದು. 

- * * * -