ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ನುಲಿಯ ಚಂದಯ್ಯ: ಪಿ. ಗಾದೆಪ್ಪ

ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ನುಲಿಯ ಚಂದಯ್ಯ: ಪಿ. ಗಾದೆಪ್ಪ  Nuliya Chandayya, who proclaimed the significance of work to the world: P. Gadeppa


ಬಳ್ಳಾರಿ, ಆ.30: ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯ ಅವರು ಗುರು, ಲಿಂಗ, ಜಂಗಮ ತತ್ವವನ್ನು ಜನರಿಗೆ ಪರಿಚಯಿಸುವ ಮೂಲಕ ಬಸವಣ್ಣನವರ ವಿನೂತನ ವಿಚಾರಧಾರೆ ಹಾಗೂ ಧಾರ್ಮಿಕ ಚಿಂತನೆಗೆ ಆಕರ್ಷಿತರಾಗಿದ್ದರು ಎಂದು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರ ಪಿ. ಗಾದೆಪ್ಪ ಹೇಳಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.  

12ನೇ ಶತಮಾನದ ಶರಣ ಪರಂಪರೆಯಲ್ಲಿ ನುಲಿಯ ಚಂದಯ್ಯ ಅವರು ರಚಿಸಿದ ವಚನಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ. ಕಾಯಕವನ್ನು ಶ್ರೇಷ್ಠವೆಂದು ಸಾರಿದ ಅವರು, ತಮ್ಮ ಊರಾದ ಶಿವಣಗಿಯಿಂದ ಕಲ್ಯಾಣಕ್ಕೆ ಬಂದು ಹುಲ್ಲಿನಿಂದ ಹಗ್ಗ ನೇಯುವ ವೃತ್ತಿಯ ಮೂಲಕ ದುಡಿಮೆಯ ಘನತೆಯನ್ನು ಸಮಾಜಕ್ಕೆ ಪರಿಚಯಿಸಿದರು ಎಂದು ಹೇಳಿದರು.  

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಕಾಯಕಯೋಗಿ ನುಲಿಯ ಚಂದಯ್ಯ ಅವರು ಅನೇಕ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಸಮಾಜದ ನಾಗರಿಕರ ಜೀವನಕ್ಕೆ ದಾರೀದೀಪವಾಗಿದ್ದರು. ಇಂತಹ ಮಹನೀಯರ ಜಯಂತಿಯನ್ನು ಆಚರಿಸುವುದರ ಜೊತೆಗೆ, ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.  

ಬಡವರ ಕಲ್ಯಾಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರ ಜೀವನಕ್ಕೆ ನೆರವಾಗಿದೆ ಎಂದು ಅವರು ತಿಳಿಸಿದರು.  ಕಾರ್ಯಕ್ರಮದಲ್ಲಿ ಚೈತನ್ಯ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಶಿವರಾಮ ಕೆ. ಅವರು ಉಪನ್ಯಾಸ ನೀಡಿದರು.

ವಿಜಯಪುರ ಜಿಲ್ಲೆಯ ಶಿವಣಗಿ ನುಲಿಯ ಚಂದಯ್ಯ ಅವರ ಹುಟ್ಟೂರು. ಬಸವಾದಿ ಶರಣರೊಂದಿಗೆ ಅನುಭವ ಮಂಟಪದಲ್ಲಿದ್ದ ಶರಣ ಚಂದಯ್ಯ ಅವರು ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಹೊಳೆ ಮಾರ್ಗವಾಗಿ ದುಮ್ಮಿಗೆ ಬರುತ್ತಿದ್ದರು.

ಹುಲ್ಲನ್ನು ತಂದು ಹಗ್ಗ ನೇಯುವುದರ ಜೊತೆಗೆ ಅದರಿಂದ ವಿವಿಧ ಪರಿಕರಗಳನ್ನು ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದರು. ಈ ಕಾಯಕದಿಂದ ಬಂದ ಆದಾಯವನ್ನು ಬಡ ಜನರ ದಾಸೋಹಕ್ಕಾಗಿ ಮೀಸಲಿಡುತ್ತಿದ್ದರು. ಅವರ ಕಾಯಕನಿಷ್ಠೆಯೇ ಅವರ ಶ್ರೇಷ್ಠತೆಯಾಗಿತ್ತು ಎಂದು ವಿವರಿಸಿದರು.  

ಕಾರ್ಯಕ್ರಮದಲ್ಲಿ ಬಳ್ಳಾರಿಯ ಕೆ. ಉಮೇಶ್ ಮತ್ತು ತಂಡದವರು ವಚನ ಸಂಗೀತ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕುಬೇರ, ವಿವೇಕ್ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.  

ಸಂಭ್ರಮದ ಮೆರವಣಿಗೆ  

ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿಯ ಅಂಗವಾಗಿ ನಗರದಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು. ಬೆಳಗ್ಗೆ 10.30ಕ್ಕೆ ನಗರದ ಮುನ್ಸಿಪಲ್ ಮೈದಾನ ಆವರಣದಿಂದ ಆರಂಭವಾದ ಮೆರವಣಿಗೆಯು ಗಡಗಿ ಚೆನ್ನಪ್ಪ ವೃತ್ತ, ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ ಹಾಗೂ ಎಚ್‌.ಆರ್‌. ಗವಿಯಪ್ಪ ವೃತ್ತದ ಮೂಲಕ ಸಾಗಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಸಭಾಂಗಣ ತಲುಪಿ ಸಂಪನ್ನಗೊಂಡಿತು.