ಈಗ ನಾನು ಸೈಲೆಂಟ್, ಮುಂದೆ ಒಬ್ಬೊಬ್ಬರಾಗಿ ವೈಲೆಂಟ್: ಯತ್ನಾಳ್​

Now I'm Silent: Yatnal

ಹುಬ್ಬಳ್ಳಿ 07: ನಾನು ಸದ್ಯಕ್ಕೆ ಸೈಲೆಂಟ್ ಆಗುತ್ತೇನೆ. ಮುಂದೆ ಒಬ್ಬೊಬ್ಬರಾಗಿ ವೈಲೆಂಟ್ ಆಗುತ್ತಾ ಹೋಗುತ್ತೇವೆ. ಆ ರೀತಿಯ ಪ್ಲಾನ್​ ಹಾಕಿಕೊಂಡಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೊಸ ಬಾಂಬ್ ಸಿಡಿಸಿದ್ದಾರೆ.

ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಯನ್ನು ಪರ್ಮನೆಂಟ್ ಆಗಿ ನಿಲ್ಲಿಸಿ ಎಂದು ದೆಹಲಿ ನಾಯಕರಿಂದ ಸೂಚನೆ ಪಡೆದು ಬಂದಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಹೋರಾಟ ಚುಕ್ಕಾಣಿಯನ್ನು ಹಸ್ತಾಂತರ ಮಾಡುವ ಸುಳಿವು ನೀಡಿದ್ದಾರೆ. 'ಇನ್ಮೇಲೆ ನಾನು ಸೈಲೆಂಟ್ ಆಗುತ್ತೇನೆ, ಶಾಸಕ ರಮೇಶ್ ಜಾರಕಿಹೊಳಿ ವೈಲೆಂಟ್ ಆಗುತ್ತಾರೆ ಎಂದಿದ್ದಾರೆ. ಜೊತೆಗೆ ನಮ್ಮ ನಾಯಕರ ವಿರುದ್ಧ ಗುಪ್ತ ಪತ್ರಗಳನ್ನು ಕೇಂದ್ರಕ್ಕೆ ಬರೆಯುತ್ತೇವೆ. ವಿಜಯೇಂದ್ರ ಸೇರಿ ಎಲ್ಲರ ಬಗ್ಗೆಯೂ ಬರೀತಿವಿ, ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲವೇ ಅಲ್ಲ, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವುದೇ ನಮ್ಮ ಟಾರ್ಗೆಟ್. ನಾವು ಅಧಿಕಾರಕ್ಕೆ ಬಂದಾಗ ಪ್ರಾಮಾಣಿಕರನ್ನು ಸಿಎಂ ಮಾಡುವ ಗುರಿಯಿದೆ. ಭ್ರಷ್ಟರು ಸಿಎಂ ಆಗಬಾರದು ಎನ್ನುವುದು ನಮ್ಮ ಉದ್ದೇಶ ಎಂದರು. 

ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಒಪ್ಪಲ್ಲ ಎಂದಿರುವ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಸದ್ಯ ನಾನು ಸೈಲೆಂಟ್, ಜಾರಕಿಹೊಳಿ ವೈಲೆಂಟ್​ ಅವರಿಗೆ ಒಂದು ಪಿರಿಯೇಡ್ ಕೊಟ್ಟಿದ್ದೇವೆ. ಅವರ ನಂತರ ಮತ್ತೊಬ್ಬರು ವೈಲೆಂಟ್ ಆಗುತ್ತಾರೆ. ಯತ್ನಾಳ್​​ ತಣ್ಣಗಾಗಿದ್ದರೆ ಅಂತ ಹೇಳುವ ಬದಲಿಗೆ ಬರ್ಪ್​ ಆಗಿದ್ದಾರೆ ಅಂತ ಬರೆಯಿರಿ. ನನ್ನಲ್ಲಿರುವ ಹುರುಪನ್ನು ನೋಡಿಯಾದರೂ ಬರೆಯಿರಿ.‌ 35 ವರ್ಷದ ರಾಜಕೀಯ ಜೀವನವಿದೆ. ಕೆಟ್ಟ ಕಾಲದಲ್ಲಿ ಏನಾದರೂ ಆಗಿರಬಹುದು. ಆದರೆ ಯತ್ನಾಳ್​ರನ್ನು ಹೊರಗೆ ಹಾಕುತ್ತೇನೆ ಅನ್ನುವುದು ಮೂರ್ಖತನ. ನನ್ನ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆಯೇ ಇಲ್ಲ. ಒಳ್ಳೆಯ ಕೆಲಸ ಮಾಡಲು ಹೇಳಿದ್ದಾರೆ. ಮುಂದೆ ಒಳ್ಳೆಯ ಭವಿಷ್ಯವಿದೆ ಎಂದೂ ಹೇಳಿದ್ದಾರೆ" ಎಂದು ತಿಳಿಸಿದರು. ನನ್ನ ಮೇಲೆ ಹೈಕಮಾಂಡ್ ಗೆ ಯಾವಾಗಲೂ ಪ್ರೀತಿ ಇದ್ದೇ ಇದೆ. ಯತ್ನಾಳ್ ನನ್ನು ಮುಗಿಸುತ್ತೇವೆ ಎನ್ನುವವರಿಂದ ಏನೂ ಆಗಲ್ಲ. ಯಾರಿಂದಲೂ ನನಗೆ ಏನೂ ಮಾಡಲು ಆಗುವುದಿಲ್ಲ. ಯಾರಾರು ಉತ್ತರ ಕೊಡುತ್ತಾರೋ ನೋಡೋಣ. ಅವರೆಲ್ಲರಿಗೂ ಉತ್ತರ ಕೊಡಲು ನಾನು ಸಿದ್ದ. ನನಗೆ ಅಂಜಿಕೆಯಿಲ್ಲ, ಅಳುಕಿಲ್ಲ ಎಂದು ಹೇಳಿದರು. 

ದೆಹಲಿಯಿಂದ ಹಸನ್ಮುಖಿಯಾಗಿ ಬರುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನನ್ನನ್ನು ಯಾರೂ ತರಾಟೆಗೆ ತೆಗೆದುಕೊಂಡಿಲ್ಲ. ದೆಹಲಿ ನಾಯಕರು ನನಗೆ ಶಹಬಾಸ್ ಗಿರಿಕೊಟ್ಟಿದ್ದಾರೆ. ಹೈಕಮಾಂಡ್ ಕೊಟ್ಟ ನೋಟಿಸ್ ಗೆ ನಾನು ಉತ್ತರ ಕೊಟ್ಟಿದ್ದೇನೆ. ನನ್ನ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆಯೇ ಇಲ್ಲ. ಮುಂದೆ ಒಳ್ಳೆಯ ಭವಿಷ್ಯವಿದೆ. ಪಕ್ಷದ ಪರ ಒಳ್ಳೆಯ ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದರು.