ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

Notice to take precautions to avoid shortage of drinking water in summer


ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ 


ಹಾವೇರಿ 30:  ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ  ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ  ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು (ವಿತ್ತೀಯ ಸುಧಾರಣೆ) ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿಶಾಲ್ . ಆರ್‌. ಅವರು ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕಂದಾಯ, ವಿಪತ್ತು ನಿರ್ವಹಣೆ, ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯಕ್ರಮಗಳು, ಕುಡಿಯುವ ನೀರು, ಆರೋಗ್ಯ ಇಲಾಖೆ ಕಾರ್ಯಕ್ರಮಗಳ  ಪರೀಶೀಲನೆ ನಡೆಸಿದರು. 

ಬರುವ ಬೇಸಿಗೆ ಸಮಯದಲ್ಲಿ ನೀರು ಪೂರೈಕೆ  ಅಗತ್ಯ ಜಲಮೂಲಗಳಿಂದ ನೀರಿನ ಸಂಗ್ರಹಣೆ ಮಾಡಿಕೊಳ್ಳಬೇಕು.  ಜಿಲ್ಲೆಯ ಎಲ್ಲ ನಗರ, ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ನಗರದ ಕುಡಿಯುವ ನೀರಿನ ಮೂಲ, ಕೊಳವೆಬಾವಿಗಳ ವಿವರ, ಅಂತರಜಲ ಮಟ್ಟಗಳ ವಿವರ, ದುರಸ್ತಿಯಲ್ಲಿರುವ ಹಾಗೂ ಸುಸ್ಥಿತಿಯಲ್ಲಿರುವ ಕೊಳವೆಬಾವಿಗಳ ಮಾಹಿತಿಯನ್ನು ಸಂಗ್ರಹಿಸಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಿದ್ಧತೆಮಾಡಿಕೊಳ್ಳಬೇಕು.  ಪರ್ಯಾಯ  ನೀರಿನ ಲಭ್ಯತೆ, ಮೂಲಗಳನ್ನು ಗುರುತುಮಾಡಿಕೊಂಡು ಅಗತ್ಯ ಬಿದ್ದಾಗ ಬಳಕೆಮಾಡಿಕೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆಮಾಡಿಕೊಳ್ಳುವಂತೆ ತಾಕೀತು ಮಾಡಿದರು.  

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಮತಾ ಅವರು ,  ಕಳೆದ ಬೇಸಿಗೆಯಲ್ಲಿ  ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿಲ್ಲ.  ಹೆಗ್ಗೇರಿ ಕೆರೆ ಹಾಗೂ ಬೋರವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿದೆ. ನೀರಿನ ಕೊರತೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು. 

ಜಾನುವಾರುಗಳಿಗೆ  ಅಗತ್ಯ ಲಸಿಕೆಗಳನ್ನು ಸಕಾಲದಲ್ಲಿ ನೀಡಬೇಕು ಹಾಗೂ ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೆ ಮೇವಿನ ಸಂಗ್ರಹಣೆ ಬಗ್ಗೆ ಗಮನಹರಿಸಬೇಕು.  ನೀರಾವರಿ ಹೊಂದಿದ ರೈತರಿಗೆ ಅಗತ್ಯ ಮೇವಿನ ಬೀಜದ ಕಿಟ್ ನೀಡಬೇಕು ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 

ಎಪ್ರಿಲ್‌-ಮೇ  ಮಾಹೆಯಲ್ಲಿ ಅಧಿಕ ಬೇಸಿಲಿನಿಂದ ಉಂಟಾಗುವ ಹೀಟ್ ಸ್ಟ್ರೋಕ್‌ಗೆ ಚಿಕಿತ್ಸೆ ನೀಡಲು ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಲಾಯನ್ ಸಂಗ್ರಹಿಸುವಂತೆ  ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಮೂರರಿಂದ ಆರು ತಿಂಗಳ ಅವಧಿಯ ಕೋರ್ಟ್‌ ಕೇಸ್‌ಗಳನ್ನು ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು. ಆರ್‌.ಟಿ.ಸಿ. ಮ್ಯೂಟೇಷನ್ ಹಾಗೂ ಆರ್‌.ಟಿ.ಸಿ. ಕರೆಕ್ಸನ್ ತ್ವರಿತವಾಗಿ ಕಾಲಮಿತಿಯೊಳಗೆ ವಿಲೇಗೊಳಿಸಬೇಕು ಹಾಗೂ ಭೂಮಾಪನ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇಗೊಳಿಸುವಂತೆ ಸೂಚನೆ ನೀಡಿದರು. 

ಜಿಲ್ಲೆಯಲ್ಲಿ ಆರ್‌ಟಿಸಿಗೆ ಆಧಾರ್ ಜೋಡಣೆ ಬಹಳ ಕಡಿಮೆಯಾಗಿದ್ದು, ಆದ್ಯತೆ ಮೇರೆಗೆ ನೂರಕ್ಕೆ ನೂರರಷ್ಟು ಆಧಾರ್ ಜೋಡಣೆಗೆ ಕ್ರಮವಹಿಸಬೇಕು ಎಂದು  ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.   

ಹಾನಗಲ್ ತಾಲೂಕಿನ ಯಳವಟ್ಟಿಯಲ್ಲಿ ಗುರುತಿಸಲಾದ ಮಾವು ಸಂಸ್ಕರಣ ಘಟಕದ ಜಮೀನ  ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ,  ಅಗತ್ಯ ಮಾಹಿತಿ ಕಲೆಹಾಕಿ  ವಿವರ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಾಗೂ  ಶಿಗ್ಗಾಂವ ಟೆಕ್ಸ್‌ಟೈಲ್ ಪಾರ್ಕ್‌ ಕಾಮಗಾರಿ ಕುರಿತು ವಿವರವಾದ ಮಾಹಿತಿ ನೀಡುವಂತೆ   ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಾಮಾಜಿಕ ಪಿಂಚಣಿ, ಅನ್ನಭಾಗ್ಯ, ಭಾಗ್ಯಲಕ್ಷ್ಮೀ ಸೇರಿದಂತೆ ವಿವಿಧ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು  ಮರಣಹೊಂದಿದ ಕುರಿತು ಇ-ಜನ್ಮ ತಂತ್ರಾಂಶದಲ್ಲಿ ದಾಖಲಾಗದ  ಪ್ರಕರಣಗಳನ್ನು ಪತ್ತೆ ಹಚ್ಚಿ  ಸೌಲಭ್ಯಗಳು ದುರುಪಯೋಗವಾಗದಂತೆ ಸ್ಥಗಿತಗೊಳಿಸಬೇಕು ಎಂದು ತಹಶೀಲ್ದಾರಗಳಿಗೆ, ಆಹಾರ ಇಲಾಖೆ ಅಧಿಕಾರಿಗಳಿಗೆ  ಸೂಚನೆ ನೀಡಿದರು.  

ತೋಟಗಾರಿಕೆ, ಕೃಷಿ ಇಲಾಖೆ, ಮೀನುಗಾರಿಕೆ,  ರೇಷ್ಮೆ , ಲೋಕೋಪಯೋಗಿ ಇಲಾಖೆ,  ಹೆಸ್ಕಾಂ, ಶಾಲಾ ಶಿಕ್ಷಣ ಇಲಾಖೆ  ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ,  ಫಲಾನುಭವಿಗಳ ಆಯ್ಕೆ ಹಾಗೂ ಕಾರ್ಯಕ್ರಮ ಅನುಷ್ಠಾನವನ್ನು ಕಾಲಮಿತಿಯೊಳಗೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್,  ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ,   ಉಪ ವಿಭಾಗಾಧಿಕಾರಿಗಳಾದ ಚೆನ್ನಪ್ಪ ಹಾಗೂ ಮಹ್ಮದ ಖಿಜರ್,  ಪದವಿ ಪೂರ್ವ ಶಿಕ್ಷಣ ಇಲಾಖೆ ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ,  ವಿವಿಧ ತಾಲೂಕುಗಳ ತಹಶೀಲ್ದಾರಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.