ಉತ್ತರ ಭಾರತವೂ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ; ರಜನೀಕಾಂತ್

  ಬೆಂಗಳೂರು, ಸೆ.18    ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ರಾಜಕೀಯ ಪ್ರವೇಶವನ್ನು ದೃಢಪಡಿಸಿದ್ದು, ಯಾವುದೇ ದೇಶದ ಸಮಗ್ರ ಅಭಿವೃದ್ಧಿಗೆ ಪ್ರಾದೇಶಿಕ ಭಾಷೆಯ ಅಗತ್ಯವಿದೆ, ದುರಾದೃಷ್ಟವಶಾತ್  ಭಾರತದಂತಹ ದೇಶದಲ್ಲಿ ಅಂತಹ ಭಾಷೆಯನ್ನು ಹೊಂದಲು ಸಾಧ್ಯವಿಲ್ಲ. ಹಿಂದಿ ಹೇರಿಕೆಯನ್ನು ಉತ್ತರ ಭಾರತದವರೂ ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.   

  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಭಾರತ ಏಕೀಕರಣದ ಹೇಳಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಜನಿಕಾಂತ್, ತಮಿಳುನಾಡು ಮಾತ್ರವಲ್ಲ, ಇಡೀ ದಕ್ಷಿಣ ಭಾರತವೇ ಹಿಂದಿ ಹೇರಿಕೆಯನ್ನು ವಿರೋಧಿಸುತ್ತದೆ ಎಂದು ಹೇಳಿದರು. 

   ಹಿಂದಿ ಮಾತ್ರವಲ್ಲ, ಬದಲಿಗೆ ಯಾವುದೇ ಭಾಷೆಯನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ. ಹಿಂದಿ ಹೇರಿದರೆ ಅದನ್ನು ತಮಿಳರು ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿರುವ ಪ್ರತಿಯೊಬ್ಬರೂ ವಿರೋಧಿಸುತ್ತಾರೆ ಹಾಗೂ ಉತ್ತರ ಭಾರತದ ರಾಜ್ಯಗಳ ಜನರೂ ಸಹ ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ ಎಂದು ಅವರು ತಿಳಿಸಿದರು.  

  ಇದೇ ಸಂದರ್ಭದಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಕಾರ್ಯಕರ್ತ ತನ್ನ ಮಗನ ಮದುವೆಗಾಗಿ ನಿರ್ಮಿಸಿದ ಅಕ್ರಮ ಬ್ಯಾನರ್ ಯುವತಿಯ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ಕುರಿತು ಮಾತನಾಡಿ, ತಮ್ಮ ಅಭಿಮಾನಿಗಳಿಗೆ ಬ್ಯಾನರ್ಗಳನ್ನು, ಹೋಡರ್ಿಂಗ್ಸ್ ಗಳನ್ನು ನಿರ್ಮಿಸದಂತೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಹೇಳಿದರು.  

  ಸಾಮಾನ್ಯ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆಗೆ ಒತ್ತು ನೀಡುವಂತೆ ಅಮಿತ್ ಷಾ ನೀಡಿರುವ ಹೇಳಿಕೆ ಡಿಎಂಕೆ, ಕಾಂಗ್ರೆಸ್, ಎಂಡಿಎಂಕೆ, ಮತ್ತು ವಿಸಿಕೆ ಸೇರಿದಂತೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಸೆಪ್ಟೆಂಬರ್ 20 ರಂದು ಹಿಂದಿ ಹೇರಿಕೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನಾ ಪ್ರದರ್ಶನವನ್ನು ಡಿಎಂಕೆ ಪಕ್ಷ ಘೋಷಿಸಿದೆ. ಎಐಎಡಿಎಂಕೆ ಸಹ ರಾಜ್ಯವು ತನ್ನ ಎರಡು ಭಾಷೆಯ ಸೂತ್ರಕ್ಕೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳನ್ನು ವಿರೋಧಿಸುತ್ತದೆ ಎಂದರು. 

  ನಟ ಹಾಗೂ ಮಕ್ಕಳ್ ನೀದಿ ಮೈಯಮ್ ಮುಖ್ಯಸ್ಥ ಕಮಲ್ ಹಾಸನ್ ಅವರು ಅಮಿತ್ ಷಾ ಅವರ ಟೀಕೆಗಳನ್ನು ವಿರೋಧಿಸುವ ವೀಡಿಯೊವನ್ನು ಸಹ ಬಿಡುಗಡೆ ಮಾಡಿದ್ದಾರೆ. "ವೈವಿಧ್ಯತೆಯಲ್ಲಿ ಏಕತೆ ಎಂಬುದು ನಾವು ಭಾರತವನ್ನು ಗಣರಾಜ್ಯವನ್ನಾಗಿ ಮಾಡಿದಾಗ ನೀಡಿದ ಭರವಸೆಯಾಗಿದೆ" ಎಂದು ಅವರು ನೆನಪಿಸಿದ್ದು "ಈಗ ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ಆ ಭರವಸೆಯನ್ನು ಹಿಮ್ಮೆಟ್ಟಿಸಬಾರದು" ಎಂದು ಕಮಲ್ ಸೂಚಿಸಿದ್ದಾರೆ. 

 "ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ, ಆದರೆ ನಮ್ಮ ಮಾತೃಭಾಷೆ ಯಾವಾಗಲೂ ತಮಿಳು ಆಗಿರುತ್ತದೆ".  ಜನವರಿ 2007 ರಲ್ಲಿ ನಡೆದ ಬೃಹತ್ ಜಲ್ಲಿಕಟ್ಟು ಪರ ಪ್ರತಿಭಟನೆಯಲ್ಲಿ ಲಕ್ಷಾಂತರ ಜನರು ಮರೀನಾದಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿರುವ ಕಮಲ್, ಇದು ಕೇವಲ ಪ್ರತಿಭಟನೆಯಾಗಿದ್ದು, ತಮಿಳು ಭಾಷೆಯ ಯುದ್ಧವು ಅದಕ್ಕಿಂತಲೂ ಪರಿಣಾಮಕಾರಿಯಾಗಿರುತ್ತದೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.   

 ಹಿಂದಿ ದಿವಸ್ ದಿನದಂದು ಅಮಿತ್ ಶಾ ಅವರು ಭಾರತವು ವಿವಿಧ ಭಾಷೆಗಳ ದೇಶವಾಗಿದೆ ಮತ್ತು ಪ್ರತಿಯೊಂದು ಭಾಷೆಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಜಗತ್ತಿನಲ್ಲಿ ಭಾರತದ ಗುರುತಾಗಬೇಕಾದ ಭಾಷೆ ಇರುವುದು ಬಹಳ ಮುಖ್ಯ. ಒಂದು ಭಾಷೆಯು ಇಂದು ದೇಶವನ್ನು ಒಂದುಗೂಡಿಸಲು ಸಾಧ್ಯವಾದರೆ, ಅದು ಹೆಚ್ಚು ಮಾತನಾಡುವ ಹಿಂದಿ ಭಾಷೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಇದು ಅನೇಕ ರಾಜ್ಯಗಳ ಕೆಂಗಣ್ಣಿಗೆ ಗುರಿಯಾಗಿದೆ.