ಹಕ್ಕಿ ಜ್ವರ ಆತಂಕ ಬೇಡ : ಡಾ.ಹರೀಶಕುಮಾರ್
ಕಾರವಾರ: ಜ-17: ದೇಶದ ವಿವಿಧ ರಾಜ್ಯಗಳಲ್ಲಿ ಕಂಡು ಬಂದಿರುವ ಹಕ್ಕಿ ಜ್ವರ ಕರ್ನಾಟಕ ರಾಜ್ಯದಲ್ಲಿ ಇವರೆಗೂ ಪತ್ತೆಯಾಗಿರುವದಿಲ್ಲ. ಉತ್ತರ ಕನ್ನಡ ಜಿಲ್ಲೆಗೆ ಹಕ್ಕಿ ಜ್ವರ ಪ್ರವೇಶಿಸದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್.ಕೆ ರವರು ತಿಳಿಸಿದರು.
ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕೋಳಿ ಶೀತ ಜ್ವರ (ಹಕ್ಕಿ ಜ್ವರ) ನಿಯಂತ್ರಣ ಮಂಡಳಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಹಕ್ಕಿ ಜ್ವರ ಜಿಲ್ಲೆಯನ್ನು ಪ್ರವೇಶಿಸದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪಶುಪಾಲನಾ ಇಲಾಖಾ ಉಪ ನಿರ್ದೇಶಕರಾದ ಡಾ.ನಂದಕುಮಾರ ಪೈ ರವರು ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ 141 ಕೋಳಿ ಫಾರಂಗಳು ಇದ್ದು ಪ್ರತಿಯೊಂದರಲ್ಲಿ 300 ರಿಂದ 500 ಮಾಂಸದ ಕೋ್ಳಿಗಳನ್ನು ಸಾಕುತ್ತಿದ್ದಾರೆ. ಅಲ್ಲದೇ ಪಕ್ಕದ ರಾಜ್ಯ ಹಾಗೂ ಜಿಲ್ಲೆಗಳಿಂದ ಮಾಂಸದ ಕೋ್ಳಿಗಳನ್ನು ಮಾರಾಟಕ್ಕಾಗಿ ತರಿಸಲಾಗುತ್ತದೆ. ಆದ್ದರಿಂದ ಗೋವಾ ರಾಜ್ಯದ ಗಡಿಗಳಾದ ಮಾಜಾಳಿ ಹಾಗೂ ಅನಮೋಡ ದಲ್ಲಿ ಚಕ್ ಪೋಸ್ಟಗಳಿಗೆ ಇಲಾಖೆಯ ಸಿಬ್ಬಂದಿಗಳನ್ನು ಈಗಾಗಲೇ ನಿಯೋಜಿಸಲಾಗಿದ್ದು, ಕೋಳಿ/ಪಕ್ಷಿ ಸಾಗಾಟ ಮಾಡುವ ಎಲ್ಲಾ ವಾಹನಗಳ ತಪಾಸಣೆ ಮತ್ತು ಪ್ರಯಾಣದ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಹಕ್ಕಿ ಜ್ವರ ಕಂಡು ಬಂದಲ್ಲಿ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಒಟ್ಟೂ 21 ಕ್ಷಿಪ್ರ ಕಾರ್ಯಾಚರಣಾ ತಂಡಗಳನ್ನು ಪಶು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದ್ದು, ಅವರಿಗೆ ಈಗಾಗಲೇ ಸೂಕ್ತ ತರಬೇತಿಯನ್ನು ಕೂಡಾ ನೀಡಲಾಗಿದೆ ಎಂದು ತಿಳಿಸಿದರು.
ಡಾ. ದೀಪಕ್, ಪಶುವೈದ್ಯಾಧಿಕಾರಿ ರವರು ಮಾತನಾಡಿ ಮಾಂಸವನ್ನು 70 ಡಿಗ್ರಿ ಉಷ್ಣಂಶದಲ್ಲಿ ಬೇಯಿಸಿದಾಗ 3 ಸೇಕಂಡ್ ಗಳಲ್ಲಿ ಹಕ್ಕಿ ಜ್ವರದ ವೈರಾಣು ನಿಷ್ಕ್ರೀಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಆತಂಕಪಡದೇ ಕೋಳಿ ಮಾಂಸವನ್ನು ಸರಿಯಾಗಿ ಬೇಯಿಸಿ ತಿನ್ನಬಹುದು ಎಂದು ತಿಳಿಸಿದರು. ಅಲ್ಲದೇ 1 ಕಿ.ಮೀ ವ್ಯಾಪ್ತಿಯಲ್ಲಿ ಅಸ್ವಾಭಾವಿಕವಾಗಿ ಕನಿಷ್ಟ 6 ಕ್ಕಿಂತ ಹೆಚ್ಚು ಪಕ್ಷಿಗಳು ಸತ್ತು ಬಿದ್ದಿರುವದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಪಶುಪಾಲನಾ ಅಧಿಕಾರಿಗಳಿಗೆ ಅಥವಾ ಸ್ಥಳೀಯ ಗ್ರಾಮ ಪಂಚಾಯತ ಅಥವಾ ಕಂದಾಯ ಅಥವಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಕೋರಿದರು
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕೃಷ್ಣಮೂರ್ತಿ.ಹೆಚ್.ಕೆ, ಎಂ, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಶರತ ನಾಯಕ ಡಾ. ವಿನೋದ ಭೂತೆ ಹಾಗೂ ಇತರರು ಹಾಜರಿದ್ದರು.