ಬೆಂಗಳೂರು, ಜ.22 : ಪೊಲೀಸರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯಲು ಹೋಗದೆ ವೃತ್ತಿಪರತೆಯಿಂದ ಕೆಲಸ ಮಾಡಬೇಕು. ಮಂಗಳೂರು ಪೊಲೀಸರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅನಗತ್ಯವಾಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಿರ್ದಿಷ್ಟ ಸಮುದಾಯದ ಬಗ್ಗೆ ಪೂರ್ವಗ್ರಹ ಹೊಂದಿರುವಸಂಘ ಪರಿವಾರದ ನಾಯಕರು ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸಾಮಾನ್ಯ ಅಪರಾಧ ಪ್ರಕರಣಗಳಿಗೂ ಕೋಮುಬಣ್ಣ ಬಳಿಯುತ್ತಿರುವುದೇ ಅಲ್ಲಿನ ಶಾಂತಿ ವ್ಯವಸ್ಥೆ ಕದಡಲು ಕಾರಣ. ತಮ್ಮ ಅಜೆಂಡಾಕ್ಕೆ ಬಳಸಲಾಗದ ಪ್ರಕರಣಗಳ ಬಗ್ಗೆ ಅವರ ಮೌನವೇ ಅವರ ದುರುದ್ದೇಶಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.
ಮಂಗಳೂರು ವಿಮಾನನಿಲ್ದಾಣಕ್ಕೆ ಬಾಂಬು ಇಟ್ಟಿರುವ ಆರೋಪಿ ಆದಿತ್ಯರಾವ್ ಎಂಬವನ ಬಗ್ಗೆ ನಿಷ್ಪಕ್ಷಪಾತವಾಗಿ ನಡೆಸಿ ಸತ್ಯ ಸಂಗತಿಯನ್ನು ಬಯಲಿಗೆಳೆಯಬೇಕು, ಆತನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವ ಹೆಸರಿನಲ್ಲಿ ನಮ್ಮದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಕೂಲಿ ಕಾರ್ಮಿಕರ ಗುಡಿಸಲುಗಳನ್ನು ನೆಲಸಮ ಮಾಡಲಾಗುತ್ತಿದೆ. ಈ ಸರ್ಕಾರಕ್ಕೇನಾದರೂ ಮಾನವೀಯತೆ ಇದೆಯೇ? ಅಷ್ಟು ಸ್ಪಷ್ಟವಾಗಿ ಉತ್ತರ ಕರ್ನಾಟಕದ ಭಾಷೆ ಮಾತನಾಡುವ ಅವರು ಬಾಂಗ್ಲಾ ಪ್ರಜೆಗಳಾಗಿರಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಳಿನಿ ಪರವಾಗಿ ಏಕೆ ವಕಾಲತ್ತು ವಹಿಸಬಾರದು ಎಂದು ಮೈಸೂರು ಜಿಲ್ಲಾ ವಕೀಲರ ಸಂಘದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಮಂಜುಳಾ ಮಾನಸ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಹಲ್ಲೆಗೆ ಯತ್ನಿಸಿದವರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಅವರು ಸರಣಿ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ಫ್ರೀ ಕಾಶ್ಮೀರ್ ಫಲಕ ಹಿಡಿದಿದ್ದ ನಳಿನ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ಹೊರಡಿಸಿರುವ ಆದೇಶ ಅಸಂವಿಧಾನಿಕ. ನಳಿನಿ ಪರವಾಗಿ ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಿರುವ ವಕೀಲರ ನಿರ್ಧಾರವನ್ನು ಸ್ವಾಗತ್ತಿಸುತ್ತೇನೆ, ಜೊತೆಗೆ ಆ ಹೆಣ್ಣುಮಗುವಿಗೆ ಶ್ರೀಘ್ರ ನ್ಯಾಯ ಸಿಗಲಿ ಎಂದು ಆಶಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈಗಲೂ ಕಾಶ್ಮೀರದಲ್ಲಿ144 ಸೆಕ್ಷನ್ ಜಾರಿಯಲ್ಲಿದೆ, ಹಲವು ನಾಯಕರನ್ನು ಗೃಹಬಂಧನದಲ್ಲಿ ಇಡಲಾಗಿದೆ, ಅಘೋಷಿತ ತುರ್ತುಪರಿಸ್ಥಿತಿ ಹೇರಿ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ. ಹಾಗಾಗಿ ಕಾಶ್ಮೀರಿಗರಿಗೆ ಬದುಕಲು ಬಿಡಿ ಎಂದು ಹುಡುಗಿಯೊಬ್ಬಳು 'ಫ್ರೀ ಕಾಶ್ಮೀರ" ಎಂಬ ಫಲಕ ಹಿಡಿದು ನಿಂತಿದ್ದಳು. ಇದು ಹೇಗೆ ದೇಶದ್ರೋಹ ಆಗುತ್ತದೆ ಎಂದು ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.