ಶೇ 8ರಷ್ಟು ಆರ್ಥಿಕಾಭಿವೃದ್ಧಿ ಸಾಧಿಸುವುದು ಸರ್ಕಾರದ ಗುರಿ- ನಿರ್ಮಲಾ ಸೀತಾರಾಮನ್

ಚೆನ್ನೈ, ಫೆ 8 : ಆರ್ಥಿಕ ಬೆಳವಣಿಗೆ ಶೇ 8ರಷ್ಟು ಸಾಧಿಸುವ ಗುರಿಯತ್ತ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.  

ಶನಿವಾರ ನಗರದಲ್ಲಿ ‘ಜನ ಸಾಮಾನ್ಯರ ಬಜೆಟ್’ ಎಂಬ ವಿಷಯವಾಗಿ ಅರ್ಥಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ನೀತಿ ತಜ್ಞರು ಸೇರಿದಂತೆ ಭಾಗೀದಾರರೊಂದಿಗೆ ಸಂವಾದ ನಡೆಸಿದ ಸಚಿವರು, ವಿದೇಶಿ ವಿನಿಮಯ ಸಂಗ್ರಹ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆ ಗರಿಷ್ಠ ಮಟ್ಟಕ್ಕೆ ಏರಿದೆ ಅವರು ಹೇಳಿದರು.

ತೆರಿಗೆ ವಿವರ ಸಲ್ಲಿಸುವವರು ಎದುರಿಸುವ ತೊಂದರೆಗಳನ್ನು ತಪ್ಪಿಸುವ ಹೊಸ ಆಲೋಚನೆಯಿಂದ ಆದಾಯ-ತೆರಿಗೆ ಕುರಿತ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ(ಎಂಎಸ್‌ಎಂಇ) ಉದ್ಯಶೀಲರ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಲಾಗುವುದು. ಇವರ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬ್ಯಾಂಕ್ ಗಳಿಂದ ಸಾಲ ನಿರಾಕರಣೆಗೊಂಡಿರುವ ಉದ್ಯಮಶೀಲರ ನೆರವಿಗೆ ಬರಲು ಸರ್ಕಾರ ಸಿದ್ಧವಾಗಿದೆ ಎಂದು ಸಚಿವರು,ಭರವಸೆ ನೀಡಿದರು.  

ಜನರ ಆಕಾಂಕ್ಷೆಗಳನ್ನು ಪೂರೈಸಲು, ಆರ್ಥಿಕ ಅಭಿವೃದ್ಧಿಯನ್ನು ಸುಧಾರಿಸಲು ಹಾಗೂ ಕಾಳಜಿಯುಳ್ಳ ಸಮಾಜ ಒದಗಿಸಲು ಬಜೆಟ್ ಸಿದ್ಧಪಡಿಸಲಾಗಿದೆ ಎಂದು ಗಮನ ಸೆಳೆದ ಸಚಿವರು, ಎಲ್ಲರನ್ನೂ ಒಳಗೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಬಜೆಟ್ ನಲ್ಲಿ ಎಲ್ಲ ಭಾಗೀದಾರರ ಅಭಿಪ್ರಾಯವನ್ನು ಪರಿಗಣಿಸಿ, ಸೇರಿಸಲಾಗಿದೆ. ಎಂದು ಹೇಳಿದ್ದಾರೆ.

ಬಜೆಟ್ ತಯಾರಿಸುವಾಗ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಭಾಗೀದಾರರಿಂದ 16 ಪ್ರಮುಖ ಅಂಶಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.