ಷೇರುದಾರರೊಂದಿಗಿನ ಬಜೆಟ್ ಪೂರ್ವ ಚರ್ಚೆಗೆ ನಿರ್ಮಲಾ ಸೀತಾರಾಮನ್ ಚಾಲನೆ

ನವದೆಹಲಿ, ಡಿ 16 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ 2020-21ನೇ ಸಾಲಿನ ಸಾರ್ವತ್ರಿಕ ಬಜೆಟ್ ಹಿನ್ನೆಲೆಯಲ್ಲಿ ವಿವಿಧ ಷೇರುದಾರ ಗುಂಪುಗಳ ಜೊತೆಗಿನ ಬಜೆಟ್ ಪೂರ್ವ ಸಂವಾದ ಆರಂಭಿಸಿದರು.   ತಮ್ಮ ಪ್ರಥಮ ಸಭೆಯಲ್ಲಿ ಅವರು ಡಿಜಿಟಲ್ ಆರ್ಥಿಕತೆಯ ಷೇರುದಾರರಾದ ಫಿನ್ ಟೆಕ್ ಮತ್ತು ಸ್ಟಾರ್ಟ್ ಅಪ್ ಗಳೊಂದಿಗೆ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಬೃಹತ್ ದತ್ತಾಂತ ತಂತ್ರಜ್ಞಾನ, ಅವುಗಳ ವಿಶ್ಲೇಷಣೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಬೃಹತ್ ದತ್ತಾಂಶ ತಂತ್ರಜ್ಞಾನಗಳ ಬಳಕೆ ಮತ್ತು ಸಾರ್ವಜನಿಕ ಆಡಳಿತದಲ್ಲಿ ಇವುಗಳ ಶಕ್ತಿಯ ಉಪಯೋಗದ ಕುರಿತು ಚರ್ಚೆ ನಡೆಸಿದರು.   ಉಳಿದಂತೆ ಡಿಜಿಟಲ್ ಮೂಲಭೂತ ಸೌಕರ್ಯಗಳು ಮತ್ತು ಸರ್ಕಾರದ ಪಾತ್ರ, ಪ್ರಮುಖವಾಗಿ ಖಾಸಗಿತನಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಆರ್ಥಿಕತೆಯ ನಿಯಂತ್ರಣ, ಹಣಕಾಸು ನಿಯಂತ್ರಣ, ಸ್ಟಾರ್ಟ್ ಅಪ್ ಗಳಿಗೆ ಸುಲಭ  ವ್ಯವಹಾರದ ವಾತಾವರಣ ಸೃಷ್ಟಿ, ಡಿಜಿಟಲ್ ಇಂಡಿಯಾದ ಮೂಲಭೂತ ಸೌಕರ್ಯದ ಕೊರತೆ, ತೆರಿಗೆ ವಿಷಯಗಳ ಕುರಿತು ಚರ್ಚಿಸಿದರು.   ಸಚಿವರೊಂದಿಗೆ ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಇಲಾಖೆಯ ಕಾರ್ಯದರ್ಶಿ ರಾಜೀವ್ ಕುಮಾರ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಥನು ಚಕ್ರವರ್ತಿ, ಕಂದಾಯ ಕಾರ್ಯದರ್ಶಿ  ಅಜಯ್ ಭೂಷಣ್ ಪಾಂಡೆ ಮತ್ತಿತರರು ಹಾಜರಿದ್ದರು.   ಚರ್ಚೆಯಲ್ಲಿ ಮಹಿಳಾ ಉದ್ಯೋಗ (ಕೌಶಲ್ಯಾಭಿವೃದ್ಧಿ),  ಯುವಜನತೆಯ ತರಬೇತಿ, ಅಂತಾರಾಷ್ಟ್ರೀಯ ತರಬೇತಿ ಮತ್ತು ದೇಶದೊಳಗೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ತೀವ್ರಗೊಳಿಸುವುದರ ಕುರಿತು ಕೂಡ ಮಹತ್ವದ ಮಾತುಕತೆ ನಡೆಯಿತು.   ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ತಜ್ಞರು ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯ್ತಿ ನೀಡಿ, ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.