ಮೆಕ್ಸಿಕೋದಲ್ಲಿ ದುಷ್ಕರ್ಮಿಗಳ ಗುಂಡಿನ ಅಮೆರಿಕ ಕುಟುಂಬದ 9 ಸದಸ್ಯರು ಬಲಿ

    ಮೆಕ್ಸಿಕೋ ನಗರ, ನ 6:   ಉತ್ತರ ಮೆಕ್ಸಿಕೋದ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಗುಂಪಿನ ಶಂಕಿತ ಸದಸ್ಯರ ಗುಂಡಿಗೆ ಬಲಿಯಾಗಿ ಮೂರು ತಾಯಂದಿರು, ಆರು ಮಕ್ಕಳು ಸೇರಿದಂತೆ ಅಮೆರಿಕದ ಕುಟುಂಬವೊಂದರ ಒಂಬತ್ತು ಸದಸ್ಯರು ಹತರಾಗಿದ್ದಾರೆ. ಉತ್ತರ ಚಿಹುವಾಹುವಾ ರಾಜ್ಯದಲ್ಲಿ ನೆಲೆಸಿದ್ದ ಅಮೆರಿಕನ್ ಪ್ರಜೆಗಳಾದ  ಕುಟುಂಬ ಎರಡು ವಾಹನಗಳಲ್ಲಿ ನೆರೆಯ ಸೊನಾರಾ ರಾಜ್ಯಕ್ಕೆ ಪಯಣಿಸುತ್ತಿದ್ದರು. ಮಾರ್ಗಮಧ್ಯದಲ್ಲಿ ಅವರ ಮೇಲೆ ದಾಳಿ ನಡೆದಿದೆ. ಭದ್ರತಾ ಪಡೆಯ ಸಿಬ್ಬಂದಿ, ಸಂತ್ರಸ್ತರನ್ನು ಈ ಪ್ರದೇಶವನ್ನು ಆಕ್ರಮಿಸಲು ಬಂದ ಕ್ರಿಮಿನಲ್ ಗಳ ತಂಡ ಎಂದು ತಪ್ಪಾಗಿ ಭಾವಿಸಿರಬಹುದು ಎಂದು ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಯಲ್ ಲೋಪೆಜ್ ಓಬ್ರೇಡರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗುಂಡಿನ ದಾಳಿಗೆ ಸಂತ್ರಸ್ತರು ಮೃತಪಟ್ಟಿದ್ದು, ಅವರ ವಾಹನಗಳಿಗೆ ಬೆಂಕಿ ತಗುಲಿದೆ. ಉಳಿದ ಆರು ಮಕ್ಕಳಿಗೆ ಗಾಯಗಳಾಗಿವೆ. ಅದೇ ಪತ್ರಿಕಾಗೋಷ್ಠಿಯಲ್ಲಿ, ಸಾರ್ವಜನಿಕ ರಕ್ಷಣಾ ಸಚಿವ ಅಲ್ಫೋನ್ಸೋ ಡುರೇಜೋ, ತನಿಖೆಯಲ್ಲಿ ಗಂಭೀರ ಪ್ರಗತಿಯಾಗುತ್ತಿದೆ ಎಂದಿದ್ದಾರೆ. ಪೆಸಿಫಿಕ್ ಡ್ರಗ್ ಕಾರ್ಟ್ಲ್ ನ ಗುಂಪೊಂದು ಈ ಪ್ರದೇಶದಲ್ಲಿ ಕ್ರಿಯಾಶೀಲವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ಗುಂಪುಗಳ ನಿಗ್ರಹಕ್ಕೆ ನೆರವು ನೀಡಲು ಮುಂದಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಮೆಕ್ಸಿಕೋ, ಅಮೆರಿಕದ ನೆರವಿನೊಂದಿಗೆ ಮಾದಕ ದ್ರವ್ಯದ ಪಿಡುಗಿನ ವಿರುದ್ಧ ಯುದ್ಧ ಸಾರಲು ಇದು ಸುಸಮಯ' ಎಂದಿದ್ದಾರೆ. ಆದರೆ, ಲೋಪೆಜ್ ಒಬ್ರೇಡರ್ ಇದನ್ನು ತಿರಸ್ಕರಿಸಿದ್ದು, ಇದು ದೇಶದ ಆಂತರಿಕ ವಿಷಯವಾಗಿದ್ದು, ಮೆಕ್ಸಿಕೋ ಸರ್ಕಾರ ಸ್ವತಂತ್ರವಾಗಿ ಇದನ್ನು ನಿಭಾಯಿಸಲಿದೆ ಎಂದಿದ್ದಾರೆ.