ನವದೆಹಲಿ, ಏ 29, ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಮುಂದಿನ ಆವೃತ್ತಿಗೆ ದಿನಾಂಕ ಹಾಗೂ ಸ್ಥಳದ ಘೋಷಣೆಯಾಗಿದೆ. ಭಾರತೀಯ ಸೇನಾಪಡೆ ಮತ್ತು ವೈಮಾನಿಕ ಕ್ಷೇತ್ರದ ತಂತ್ರಜ್ಞಾನ ಉತ್ಪನ್ನಗಳ ಅನಾವರಣಗೊಳಿಸುವ ಏಷ್ಯಾದ ಅತೀದೊಡ್ಡ, ಪ್ರತಿಷ್ಠಿತ 'ಏರೋ ಇಂಡಿಯಾ 2021' ಶೋ ಈ ಬಾರಿಯೂ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲೇ ನಡೆಯಲಿದೆ. ಮುಂದಿನ ಏರೋ ಇಂಡಿಯಾ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ನಡೆಸುವಂತೆ ಇದೇ ಫೆಬ್ರವರಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದರು. ಈ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ.ಮುಂದಿನ ವರ್ಷ ಅಂದರೇ ಫೆ.3ರಿಂದ 7ರವರೆಗೂ ಐದು ದಿನಗಳ ಕಾಲ ಏರೋ ಇಂಡಿಯಾ ಶೋ ನಡೆಯಲಿದೆ ಎಂದು ಏರೋ ಇಂಡಿಯಾ ಮತ್ತು ರಕ್ಷಣಾ ಉತ್ಪನ್ನಗಳ ವಿಭಾಗದ ವೆಬ್ ಸೈಟ್ ತಿಳಿಸಿದೆ. ಈ ಹಿಂದೆ ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆದಿದ್ದ ಏರೋ ಇಂಡಿಯಾ 2019 ಶೋ ಸಿಹಿ-ಕಹಿ ನೆನಪುಗಳೊಂದಿದೆ ಅಂತ್ಯ ಕಂಡಿತ್ತು. ಎರಡು ವರ್ಷದ ಹಿಂದೆ 2019ರಲ್ಲಿ ಫೆ.20ರಿಂದ 24ರವರೆಗೆ ನಡೆದ ಏರೋ ಇಂಡಿಯಾ ಶೋ ಎರಡು ದುರ್ಘಟನೆಗಳಿಗೆ ಸಾಕ್ಷಿಯಾಗಿತ್ತು.