ಮಕ್ಕಳಿಗೆ ರಾಮಾಯಣದ ಬದಲು ಹೊಸ ಸಾಹಿತ್ಯ ಕೊಡಬೇಕು: ಡಾ. ಮಾಲತಿ ಪಟ್ಟಣಶೆಟ್ಟಿ

ಕಲಬುರಗಿ, ಫೆ.6  :  ಮಕ್ಕಳಿಗೆ ರಾಮಾಯಣ, ತೆನಾಲಿರಾಮದಂತಹ ಕಥೆಗಳು  ರುಚಿಸುತ್ತಿಲ್ಲ. ಆದ್ದರಿಂದ ಮಕ್ಕಳಿಗೆ ಹೊಸ ಸಾಹಿತ್ಯ ಕೊಡಲು ಮುಂದಾಗಬೇಕು ಎಂದು ಡಾ ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯ ಪಟ್ಟರು.

೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಹಾತ್ಮಗಾಂಧಿ ವೇದಿಕೆಯಲ್ಲಿ ಆಯೋಜಿಸಿದ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮಕ್ಕಳಿಗೆಂದೇ ವಿಶೇಷ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಪ್ರಕಟಿಸಿ, ಚಿಂತನೆಯ ಶಕ್ತಿ ಅವರಿಗೆ ನೀಡಬೇಕಿದೆ ಎಂದರು. 

 ಪೋಷಕರು, ಶಿಕ್ಷಕರು ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದು,  ದೈಹಿಕವಾಗಿ, ಮಾನಸಿಕವಾಗಿ ಮಕ್ಕಳು ಕುಗ್ಗುತ್ತಿದ್ದಾರೆ ಎಂದರು.

ರಾಜಶೇಖರ್ ಕುಕ್ಕುಂದ ಅವರು ‘ಮಕ್ಕಳ ಮೇಲೆ ತಂತ್ರಜ್ಞಾನದ ಪ್ರಭಾವ’ ವಿಷಯ ಕುರಿತು ಮಾತನಾಡಿ, ಪ್ರಸ್ತುತ ಮಕ್ಕಳ ಮನಸ್ಸಿನ ಮೇಲೆ ಮೊಬೈಲ್ ಫೋನ್ ಭಾರಿ ಪ್ರಭಾವ ಬೀರುತ್ತಿದೆ. ಕೇವಲ ವಿಡಿಯೋ ಗೇಮ್‌ಗಳಾದ ಪಬ್ಜಿ, ಫ್ರೀ ಫೈಯರ್ ನಂತಹ ಆಟಗಳಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ ಅನೇಕ ಅನಾಹುತಗಳು ಸಂಭವಿಸಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ ಎಂದರು. 

 ಮಕ್ಕಳ ಮೆದುಳು ಮಾನಸಿಕ ವಿಕಾಸವಾಗಬೇಕಾದರೆ ಮೊದಲ ಅವರಿಗೆ ಕ್ರೀಯಾಶೀಲ, ನೈಸರ್ಗಿಕ  ಆಟಗಳನ್ನು ಆಯೋಜಿಸುವುದು ಸೂಕ್ತ.  ಅಲ್ಲದೇ, ಮನೆಯಲ್ಲಿ ಪೋಷಕರು ಟಿ.ವಿ ವೀಕ್ಷಣೆಯ ಸಮಯದಲ್ಲಿ ಮಕ್ಕಳ ಕಡೆ ಗಮನ ಹರಿಸಬೇಕು. ತಂತ್ರಜ್ಞಾನವು ಮಕ್ಕಳಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು ಎಂದರು. 

ಜಂಬುನಾಥ ಕಾಂಚ್ಯಾಣಿ ಅವರು, ‘ಮಕ್ಕಳ ಸಾಹಿತ್ಯ ಸಮೀಕ್ಷೆ’ ಕುರಿತು ಮಾತನಾಡಿ, ರಾಷ್ಟ್ರ ಕವಿ ‘ಕುವೆಂಪು’ ಅವರು ಹೇಳಿರುವಂತೆ ಮಕ್ಕಳಲ್ಲಿ ಆರಂಭಿಕದಲ್ಲಿ  ವ್ಯವಹಾರ ಜ್ಞಾನ ಇರುವುದಿಲ್ಲ. ಆದ್ದರಿಂದ  ಮಕ್ಕಳ ಸಾಹಿತ್ಯವನ್ನು ಮೂರು ೩ ರಿಂದ ೬ ವಯಸ್ಸಿನ ಮಕ್ಕಳಿಗೆ ಶಿಶು ಸಾಹಿತ್ಯ, ೬ರಿಂದ ೯ರ ವಯಸ್ಸಿನವರಿಗೆ ಬಾಲ ಸಾಹಿತ್ಯ, ಹಾಗೂ ೯ ರಿಂದ ೧೫ರ ವಯಸ್ಸಿನ ಮಕ್ಕಳಿಗೆ ಕಾಮಾರ್ಯ ಸಾಹಿತ್ಯ ಇದೆ ಎಂದು ಹೇಳಿದರು. 

ಪ್ರತಿ ವರ್ಷ ಮಕ್ಕಳ ಸಾಹಿತ್ಯ ಪುಸ್ತಕಗಳಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿದೆ.ಅದರ ಜೊತೆಗೆ ಕಾದಂಬರಿ, ಕಥೆ, ಕವನ ಸಂಕಲನಗಳಿಗೂ ಪ್ರಶಸ್ತಿಯನ್ನು ಕೊಡಬೇಕು ಎಂದು ಆಗ್ರಹಿಸಿದರು.

ಮಕ್ಕಳ ಸಾಹಿತ್ಯದ ಕುರಿತು ಇದೂವರೆಗೂ  ಒಂದು ಒಳ್ಳೆಯ ವಿಮರ್ಶೆ ಸಿಕ್ಕಿಲ್ಲ. ಹೀಗಾಗಿ ನಾವು ನೀವೆಲ್ಲ ಸೇರಿ ಮಕ್ಕಳ ಸಾಹಿತ್ಯದ ಕಡೆ ಹೆಚ್ಚಿನ ಒತ್ತುಕೊಟ್ಟು ಮಕ್ಕಳಿಗೆ ಒಂದು ಸರಳ ರೀತಿಯ ಸಾಹಿತ್ಯವನ್ನು ಕೊಡಿಸುವ ಅಗತ್ಯವಿದೆ ಎಂದರು.

 ಎಂ.ಚಂದ್ರಶೇಖರ್ ಸ್ವಾಗತಿಸಿದರು, ವಿಜಯಲಕ್ಷ್ಮೀರೆಡ್ಡಿ ನಿರೂಪಿಸಿದರು, ಮಲ್ಲಿಕಾರ್ಜುನ ಸಂಗಶೆಟ್ಟಿ ನಿರ್ವಹಿಸಿದರು, ಆರ್.ಕೆ.ಬಾಗವಾನ ವಂದಿಸಿದರು.